ಮೈಸೂರು : ಹಿರಿಯ ಪತ್ರಕರ್ತ ಹಾಗೂ ಸ್ಟಾರ್ ಆಫ್ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಯ ಸಂಪಾದಕ ಕೆ.ಬಿ. ಗಣಪತಿ(85) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೈಸೂರು ಜಿಲ್ಲೆಯ ಹಿರಿಯ ಪತ್ರಕರ್ತರಾಗಿದ್ದ ಅವರು ಸುಮಾರು 5 ದಶಕಗಳಿಂದ ತಮ್ಮ ಪತ್ರಿಕೆಯ ಮೂಲಕ ರಾಜ್ಯಾದ್ಯಂತ ಪ್ರಸಿದ್ದರಾಗಿದ್ದರು.ಮೈಸೂರಿನ ಕೆ.ಸಿ . ಲೇಔಟ್ ನ ಅವರ ನಿವಾಸದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
1993 ಮತ್ತು 1995ರ ನಡುವೆ ಕರ್ನಾಟಕ ಪತ್ರಿಕಾ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದರು. 2001ರಲ್ಲಿ ಅವರಿಗೆ ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ನೀಡಲಾಯಿತು.
ಅವರು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರೂ ಆಗಿದ್ದರು. ಸಾಹಿತಿಯೂ ಆಗಿದ್ದ ಕೆ.ಬಿ. ಗಣಪತಿ ಅವರು, ಕನ್ನಡದಲ್ಲಿ ʼಆದರ್ಶವಾದಿʼ ಎಂಬ ಕಾದಂಬರಿ ಇಂಗ್ಲಿಷ್‌ನಲ್ಲಿ ʼಅಮೇರಿಕಾ – ಆನ್ ಏರಿಯಾ ಆಫ್ ಲೈಟ್ʼ ಎಂಬ ಪ್ರವಾಸ ಕಥನ ಇಂಗ್ಲಿಷ್‌ನಲ್ಲಿ ʼದಿ ಕ್ರಾಸ್ ಅಂಡ್ ದಿ ಕೂರ್ಗ್ಸ್ʼ ಎಂಬ ಮತ್ತೊಂದು ಕಾದಂಬರಿ ಹಾಗೂ ಅಬ್ರಕಾಡಬ್ರಾ ಎಂಬ ಆಯ್ದ ಅಂಕಣಗಳ ಸಂಗ್ರಹದ ಕರ್ತೃವಾಗಿದ್ದಾರೆ.ಅಸಂಖ್ಯಾತ ಪತ್ರಕರ್ತರು ಹಾಗೂ ರಾಜಕಾರಣಿಗಳು ಗಣಪತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.




