ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು (Bengaluru) ಭಾರಿ ಕಾರ್ಯಾಚರಣೆ ನಡೆಸುವ ಮೂಲಕ ಅತ್ಯಂತ ವಿಚಿತ್ರ ಹಾಗೂ ಚಾಣಾಕ್ಷ ರೀತಿಯ ಚಿನ್ನದ ಸ್ಮಗ್ಲಿಂಗ್ (Crime) ಯತ್ನವನ್ನು ವಿಫಲಗೊಳಿಸಿದ್ದಾರೆ.
ಕಸ್ಟಮ್ಸ್ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಲಗೇಜ್ ಟ್ರ್ಯಾಲಿಗಳನ್ನು ಬಳಸಿಕೊಂಡು, ತಮಗೇ ಅರಿವಿಲ್ಲದಂತೆ ಸಾಮಾನ್ಯ ಪ್ರಯಾಣಿಕರನ್ನು ಅಕ್ರಮ ಚಿನ್ನದ ಸಾಗಾಟಕ್ಕೆ ದಾಳವಾಗಿಸಿಕೊಂಡಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಈ ದಿಢೀರ್ ದಾಳಿಯ ವೇಳೆ ಡಿಆರ್‌ಐ ಅಧಿಕಾರಿಗಳು ಸುಮಾರು 1.80 ಕೋಟಿ ರೂಪಾಯಿ ಮೌಲ್ಯದ 1.3 ಕೆಜಿ ತೂಕದ ಚಿನ್ನದ ಬಿಸ್ಕೆಟ್‌ಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.
ಮಲೇಷ್ಯಾದ ಕೌಲಾಲಂಪುರ ನಗರದಿಂದ ಬೆಂಗಳೂರಿಗೆ ಆಗಮಿಸಿದ್ದ ಇಬ್ಬರು ಆರೋಪಿಗಳು ಈ ಕುತಂತ್ರದ ಮಾಸ್ಟರ್ ಪ್ಲಾನ್ ರೂಪಿಸಿದ್ದರು. ಕಸ್ಟಮ್ಸ್ ತಪಾಸಣೆ ವೇಳೆ ತಮ್ಮ ಸ್ವಂತ ಲಗೇಜ್‌ನಲ್ಲಿ ಚಿನ್ನ ತಂದರೆ ತಕ್ಷಣವೇ ಸಿಕ್ಕಿಬೀಳುತ್ತೇವೆ ಎಂಬ ಭೀತಿಯಿಂದ, ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಈ ಹೊಸ ಹಾದಿಯನ್ನು ಕಂಡುಕೊಂಡಿದ್ದರು.


