ಬೆಂಗಳೂರು: ಕರ್ನಾಟಕದಲ್ಲಿ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಕ್ಷಣದ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಬರಪೀಡಿತ ತಾಲೂಕುಗಳ ಪ್ರತಿ ರೈತನ ಖಾತೆಗೆ ತಲಾ ₹2,500 ನೆರವು ಜಮಾ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ .
ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆಯಾಗುವುದನ್ನು ಕಾಯದೆ, ರಾಜ್ಯ ಸರ್ಕಾರವೇ ತನ್ನ ಸಂಪನ್ಮೂಲಗಳಿಂದ ರೈತರಿಗೆ ತಾತ್ಕಾಲಿಕ ನೆರವು ನೀಡಲು ಮುಂದಾಗಿದೆ ಎನ್ನಲಾಗಿದೆ. ಈ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.ಇದು ರೈತರಿಗೆ ಒಂದೇ ಬಾರಿಗೆ ನೀಡುವ ₹2,500 ಆರ್ಥಿಕ ನೆರವಾಗಿದ್ದು, ಬರ ಹಾಗೂ ಸಂಕಷ್ಟದಿಂದ ತೊಂದರೆಗೊಳಗಾಗಿರುವ ರೈತರಿಗೆ ಸರ್ಕಾರದ ಕಡೆಯಿಂದ ತಾತ್ಕಾಲಿಕ ಸಾಂತ್ವನದ ನೆರವಾಗಲಿದೆ.ಸದ್ಯ, 40 ಲಕ್ಷ ರೈತರಿಗೆ ಹಣ ಜಮೆಯಾಗಲಿದ್ದು, ಆರಂಭಿಕ ಹಂತದಲ್ಲಿ ಸರ್ಕಾರ 2500 ರೂ ಜಮೆ ಮಾಡಲಿದೆ. ಕೇಂದ್ರದಿಂದ ಹಣಕಾಸಿನ ನೆರವು ಬಂದ ಬಳಿಕ ಮತ್ತೆ ಸರ್ಕಾರ ಹಣ ಹಾಕಲಿದೆ.
ಕೇಂದ್ರದ ಹಣ ಬಂದ ಬಳಿಕವೂ ನೆರವು?
ರಾಜ್ಯ ಸರ್ಕಾರದಿಂದ ₹2,500 ನೆರವು ನೀಡಿದ ಬಳಿಕ ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆಯಾದರೆ, ನಿಯಮಾನುಸಾರ ರೈತರಿಗೆ ಮತ್ತಷ್ಟು ಪರಿಹಾರ ನೀಡುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.
ಈ ಪ್ರಸ್ತಾವನೆಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸಂಪುಟದ ಒಪ್ಪಿಗೆ ದೊರೆತ ಬಳಿಕ ಅರ್ಹ ರೈತರ ಸಂಖ್ಯೆ, ಹಣಕಾಸಿನ ಒಟ್ಟು ಹೊರೆ ಹಾಗೂ ಹಣ ಜಮಾ ಮಾಡುವ ಪ್ರಕ್ರಿಯೆ ಸೇರಿದಂತೆ ವಿವರಗಳನ್ನು ಸರ್ಕಾರ ಪ್ರಕಟಿಸುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹೊಡೆತ ಬಿದ್ದಿರುವ ಸಂದರ್ಭದಲ್ಲಿ ಸರ್ಕಾರದ ಈ ನಿರ್ಧಾರ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡುವ ಉದ್ದೇಶ ಹೊಂದಿದೆ.


