ಬೆಂಗಳೂರು : ಕರ್ನಾಟಕ ರಾಜ್ಯವು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರೈತರು, ಜನಸಾಮಾನ್ಯ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. NDRF ಮಾನದಂಡಗಳನ್ವಯ ರಾಜ್ಯಕ್ಕೆ 3705.30 ಕೋಟಿ ರೂ. ಬರ ಪರಿಹಾರ ನೀಡಿ' ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕೇಂದ್ರ ಬರ ಅಧ್ಯಯನ ತಂಡಕ್ಕೆ ಮನವಿ ಮಾಡಿದರು.
ಬರ ಅಧ್ಯಯನಕ್ಕೆ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರದ ಅಂತರ್ಸಚಿವಾಲಯ ತಂಡದೊಂದಿಗೆ ಅವರು ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿಮಾಲೋಚನೆ ನಡೆಸಿದರು.
ರಾಜ್ಯಕ್ಕೆ ನ್ಯಾಯಸಮ್ಮತ ಪರಿಹಾರ ದೊರಕಿಸಿ
“ರಾಜ್ಯದಲ್ಲಿ 240 ತಾಲ್ಲೂಕುಗಳ ಪೈಕಿ 217 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಯಾವುದೇ ಒತ್ತಡಗಳಿಗೆ ಜಗ್ಗದೆ, ಕೇಂದ್ರ ಸರ್ಕಾರದ ವಿಪತ್ತು ನಿರ್ವಹಣೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಅತ್ಯಂತ ವೈಜ್ಞಾನಿಕವಾಗಿ ಮೌಲ್ಯಮಾಪನ ನಡೆಸಿ ಬರಪೀಡಿತ ತಾಲ್ಲೂಕುಗಳನ್ನು ಘೋಷಿಸಲಾಗಿದೆ” ಎಂದು ತಿಳಿಸಿದರು.
ರೈತರು ಕಂಗಾಲಾದರೆ ಎಲ್ಲವೂ ಸ್ಥಗಿತಗೊಂಡಂತೆ- ಸಿಎಂ
“ರೈತರು ಕಂಗಾಲಾದರೆ ಎಲ್ಲವೂ ಸ್ಥಗಿತವಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರವು ರಾಜ್ಯದ ರೈತರ ನೆರವಿಗೆ ಧಾವಿಸಬೇಕು” ಎಂದು ಮನವಿ ಮಾಡಿದರು.
ಆಘಾತಕಾರಿ ಪರಿಸ್ಥಿತಿ
“ನನ್ನ ಹಾಗೂ ಉಪಮುಖ್ಯಮಂತ್ರಿ ಡಾ. ಪರಮೇಶ್ವರ ಅವರ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ಜನರು ಇಷ್ಟು ತೊಂದರೆಗೊಳಗಾಗಿರುವುದನ್ನು ನೋಡಿಲ್ಲ. ಇದು ಅತ್ಯಂತ ಆಘಾತಕಾರಿ ಪರಿಸ್ಥಿತಿ. ಜನಪ್ರತಿನಿಧಿಗಳು ಹಾಗೂ ರೈತರ ಸಮಸ್ಯೆಗಳನ್ನು ಅರಿಯಲು ವಿಶೇಷ ಅಧಿವೇಶನ ಕರೆಯಲಾಗಿತ್ತು. 150 ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳ ಕುರಿತು ಮಾತನಾಡಿದರು” ಎಂದು ವಿವರಿಸಿದರು.


