ಕಲಬುರಗಿ: ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಹೆಂಡತಿಯ ಮೇಲಿದ್ದ ಸಿಟ್ಟನ್ನು ಮುಗ್ಧ ಮಗುವಿನ ಮೇಲೆ ತೀರಿಸಿಕೊಂಡ ಅಮಾನವೀಯ ಘಟನೆಯೊಂದು ಜಿಲ್ಲೆಯ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಕೇವಲ ನಾಲ್ಕು ವರ್ಷದ ಪುಟ್ಟ ಮಗುವನ್ನು ತಂದೆಯೇ ಜಲಾಶಯದ ನೀರಿನಲ್ಲಿ ಮುಳುಗಿಸಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಹಸರಗುಂಡಗಿ ನಿವಾಸಿ ಸೋಮರಾವ್ ಹೂಗಾರ್ ಎಂಬಾತನೇ ಈ ಕೃತ್ಯವೆಸಗಿದ ದುರುಳ. ಪತ್ನಿ ಕಲ್ಪನಾ ಜೊತೆಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದ ಈತ, ಆಕೆಯ ಮೇಲಿನ ಸೇಡಿಗೆ ಮಗು ಗುಂಡೇಶ್‌ನನ್ನು (4) ಬಲಿಪಶು ಮಾಡಿದ್ದಾನೆ.
ಜಗಳದ ಬಳಿಕ ಏನೂ ಅರಿಯದ ಪುಟ್ಟ ಮಗುವನ್ನು ಆಡಿಸುವ ನೆಪದಲ್ಲಿ ಮನೆಯಿಂದ ಹೊರಗೆ ಕರೆದೊಯ್ದಿದ್ದ ಈತ, ನೇರವಾಗಿ ನಾಗರಾಳ ಜಲಾಶಯಕ್ಕೆ ಕರೆದೊಯ್ದು ನೀರಿಗೆ ಎಸೆದು ಪರಾರಿಯಾಗಿದ್ದ.
ಮಗು ನಾಪತ್ತೆಯಾಗಿರುವ ಕುರಿತು ಗಾಬರಿಗೊಂಡ ತಾಯಿ ಕಲ್ಪನಾ, ಪತಿಯ ಕೃತ್ಯದ ಬಗ್ಗೆ ಅನುಮಾನಗೊಂಡು ತಕ್ಷಣವೇ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ನಾಗರಾಳ ಜಲಾಶಯದಿಂದ ಮಗುವಿನ ಮೃತದೇಹವನ್ನು ಹೊರತೆಗೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಸೋಮರಾವ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ. ತಂದೆಯ ಕ್ರೂರ ವರ್ತನೆಗೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.


