ನವದೆಹಲಿ: ರಾಜಧಾನಿ ದೆಹಲಿ(Delhi) ಮತ್ತು ಸುತ್ತಮುತ್ತಲಿನ ಎನ್‌ಸಿಆರ್ (NCR) ಪ್ರದೇಶದ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ದೆಹಲಿಯಲ್ಲಿ ಸಂಕುಚಿತ ನೈಸರ್ಗಿಕ ಅನಿಲ (CNG) ದರದಲ್ಲಿ ಪ್ರತಿ ಕೆಜಿಗೆ 3.89 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಈ ನೂತನ ದರ ಪರಿಷ್ಕರಣೆ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದ್ದು, ದೆಹಲಿಯಲ್ಲಿ ಪ್ರಸ್ತುತ ಒಂದು ಕೆಜಿ ಸಿಎನ್‌ಜಿ ಬೆಲೆ 86.98 ರೂಪಾಯಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಅನಿಲ ದರ
ದೆಹಲಿ-ಎನ್‌ಸಿಆರ್ ಭಾಗದಲ್ಲಿ ಸಿಎನ್‌ಜಿ ಪೂರೈಸುವ ಸಾರ್ವಜನಿಕ ವಲಯದ ಇಂದಿರಾಗಾಂಧಿ ಗ್ಯಾಸ್ ಲಿಮಿಟೆಡ್ (IGL) ಕಂಪನಿಯು ಈ ಬೆಲೆ ಏರಿಕೆಯನ್ನು ಪ್ರಕಟಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದ್ರವೀಕೃತ ನೈಸರ್ಗಿಕ ಅನಿಲದ (LNG) ಆಮದು ವೆಚ್ಚ ವಿಪರೀತ ಹೆಚ್ಚಿರುವುದೇ ಈ ಬೆಲೆ ಪರಿಷ್ಕರಣೆಗೆ ಮುಖ್ಯ ಕಾರಣ ಎಂದು ಕಂಪನಿ ತಿಳಿಸಿದೆ.
ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ಅನಿಲದ ವೆಚ್ಚ ಸತತವಾಗಿ ಏರುತ್ತಿರುವುದರಿಂದ, ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಬೇಕಾಯಿತು ಎಂದು ಕಂಪನಿ ಸ್ಪಷ್ಟನೆ ನೀಡಿದೆ.


