ಬೆಂಗಳೂರು: ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ರೈಲ್ವೆ ನೇಮಕಾತಿ ಮಂಡಳಿಯು (RRB) ಒಟ್ಟು 3,548 ಹುದ್ದೆಗಳ ಭರ್ತಿಗೆ ಚಾಲನೆ ನೀಡಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ನೇಮಕಾತಿಯಲ್ಲಿ ಪ್ರಮುಖವಾಗಿ ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಬೃಹತ್ ಸಂಖ್ಯೆಯ ಅಂದರೆ 2,750 ಹುದ್ದೆಗಳು ಲಭ್ಯವಿವೆ.
ಇದರ ಹೊರತಾಗಿ 371 ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, 300 ಜೂನಿಯರ್ ಅಕೌಂಟ್ ಅಸಿಸ್ಟಂಟ್ ಕಮ್ ಟೈಪಿಸ್ಟ್ ಹಾಗೂ 127 ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್ವೈಸರ್ ಹುದ್ದೆಗಳಿಗೆ ಈ ಪ್ರಕ್ರಿಯೆ ನಡೆಯಲಿದೆ.
ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Degree) ಪೂರ್ಣಗೊಳಿಸಿರಬೇಕು. ಅರ್ಜಿದಾರರ ವಯೋಮಿತಿಯು 18 ರಿಂದ 30 ವರ್ಷಗಳ ನಡುವೆ ಇರಬೇಕಾಗುತ್ತದೆ.
ಸರ್ಕಾರದ ನಿಯಮಾವಳಿಗಳ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ, ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 10 ರಿಂದ 15 ವರ್ಷಗಳ ಕಾಲ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕವಾಗಿ ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳು 500 ರೂಪಾಯಿ ಪಾವತಿಸಬೇಕಿದ್ದು, ಮಹಿಳೆಯರು, ಎಸ್‌ಸಿ, ಎಸ್‌ಟಿ, ತೃತೀಯಲಿಂಗಿ ಹಾಗೂ ಇಬಿಸಿ ಅಭ್ಯರ್ಥಿಗಳಿಗೆ 250 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಆಸಕ್ತರು ಆನ್‌ಲೈನ್ ವಿಧಾನದ ಮೂಲಕವೇ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳ ಆಯ್ಕೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನಡೆಯಲಿದೆ.
ಅಕೌಂಟ್ಸ್ ಕ್ಲರ್ಕ್ ಮತ್ತು ಜೂನಿಯರ್ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಟೈಪಿಂಗ್ ಸ್ಕಿಲ್ ಟೆಸ್ಟ್ ಎದುರಿಸಬೇಕಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆ ನಡೆಸಿ ನೇಮಕಾತಿ ಆದೇಶ ನೀಡಲಾಗುತ್ತದೆ.


