ಬೀದರ್ : ಅಕ್ರಮವಾಗಿ ನಾಡ ಪಿಸ್ತೂಲ್‌ಗಳನ್ನು ಮಾರಾಟದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಬೀದರ್ ಪೊಲೀಸರು ಕಾರ್ಯಚರಣೆ ನಡೆಸಿದ್ದು, ಈ ವೇಳೆ ಒಟ್ಟು 10 ನಾಡ ಪಿಸ್ತೂಲ್, 36 ಜೀವಂತ ಗುಂಡುಗಳು ಹಾಗೂ ಐದು ತಲವಾರುಗಳು ಸಿಕ್ಕಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಸ್ತ್ರಾಸ್ತ್ರ ಮಾರಾಟಗಾರರು, ಮಹಾರಾಷ್ಟ್ರ ಮೂಲದ ಕಿಂಗ್‌ಪಿನ್ ಸೇರಿದಂತೆ ಶಸ್ತ್ರಾಸ್ತ್ರ ಖರೀದಿಸಿದ್ದ ಮೂವರು ಯುವಕರನ್ನು ಬಂಧಿಸಲಾಗಿದೆ.ಅಲ್ಲದೇ ಪತ್ತೆಯಾದ 10 ನಾಡ ಪಿಸ್ತೂಲ್, 36 ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
2026ರ ಜುಲೈ 15ರಂದು ಬೀದರ್ ನಗರದ ಜ್ಞಾನಸುಧಾ ಶಾಲೆ ಬಳಿಯ ರಿಂಗ್‌ರೋಡ್‌ನಲ್ಲಿ ದ್ವಿಚಕ್ರ ವಾಹನದ ಮೂಲಕ ಅಕ್ರಮವಾಗಿ ನಾಡ ಪಿಸ್ತೂಲ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರ ಬಗ್ಗೆ ಮಾಹಿತಿ ಪಡೆದ ಸಬ್ ಅರ್ಬನ್ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಆರೋಪಿಗಳನ್ನು ಬಂಧಿಸಿ, ಅವರಿಂದ 5 ನಾಡ ಪಿಸ್ತೂಲ್, 26 ಜೀವಂತ ಗುಂಡುಗಳು ಹಾಗೂ ಐದು ತಲವಾರುಗಳನ್ನು ವಶಕ್ಕೆ ಪಡೆದಿದ್ದರು.
ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಶಸ್ತ್ರಾಸ್ತ್ರಗಳ ಪ್ರಮುಖ ಪೂರೈಕೆದಾರನಿಗಾಗಿ ಶೋಧ ನಡೆಸಿದ್ದರು.
ಈ ವೇಳೆ ಮಹಾರಾಷ್ಟ್ರ ಮೂಲದ ಬಲಬೀರ್ ಸಿಂಗ್ ಅಲಿಯಾಸ್ ಶೇರ್ ಜಾಧವ್ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ 2 ಪಿಸ್ತೂಲ್ ಹಾಗೂ 12 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಕಿಂಗ್‌ಪಿನ್ ಬಲಬೀರ್ ಸಿಂಗ್ ವಿರುದ್ಧ ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರ್ಮ್ಸ್ ಆ್ಯಕ್ಟ್‌ಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


