ಬೆಂಗಳೂರು: ರಾಜ್ಯದ ಜನರಿಗೆ ಶೀಘ್ರದಲ್ಲೇ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಯಿದ್ದು, ನಂದಿನಿ ಹಾಲಿನ ದರ ಹಾಗೂ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರವನ್ನು ಹೆಚ್ಚಿಸುವ ಕುರಿತು ಮಂಗಳವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ (Cabinet meeting) ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.
ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಹಾಗೂ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳು ಪ್ರತಿ ಲೀಟರ್ ನಂದಿನಿ ಹಾಲಿನ ದರವನ್ನು 4 ರಿಂದ 5 ರೂಪಾಯಿಗಳವರೆಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ರೈತರ ಹಿತರಕ್ಷಣೆ ಹಾಗೂ ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದನ್ನು ಮುನ್ನೆಲೆಗೆ ತಂದು ಈ ಬೆಲೆ ಏರಿಕೆಗೆ ಕೆಎಂಎಫ್ ಮನವಿ ಮಾಡಿದೆ.
ಮತ್ತೊಂದೆಡೆ, ರಾಜ್ಯ ಸಾರಿಗೆ ನಿಗಮಗಳ ನಷ್ಟ ಮತ್ತು ನಿರಂತರವಾಗಿ ಏರಿಕೆಯಾಗುತ್ತಿರುವ ಡೀಸೆಲ್ ದರದಿಂದಾಗಿ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಈ ನಷ್ಟವನ್ನು ಸರಿದೂಗಿಸಲು ಬಸ್ ಪ್ರಯಾಣ ದರವನ್ನು ಹೆಚ್ಚಿಸುವುದು ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಈ ಕುರಿತು ಸಾರಿಗೆ ಇಲಾಖೆಯಲ್ಲೂ ಪ್ರಸ್ತಾವನೆ ಸಿದ್ಧಗೊಂಡಿದೆ.
ಜನಸಾಮಾನ್ಯರ ಜೇಬಿಗೆ ನೇರ ಪರಿಣಾಮ ಬೀರಲಿರುವ ಈ ಎರಡೂ ಪ್ರಮುಖ ವಿಷಯಗಳು ಈಗ ಸರ್ಕಾರದ ಅಂಗಳದಲ್ಲಿದ್ದು, ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ವಿಸ್ತೃತ ಚರ್ಚೆಗಳು ನಡೆಯಲಿವೆ.
ಸಾರ್ವಜನಿಕರ ಹಿತಾಸಕ್ತಿ ಮತ್ತು ಸಂಸ್ಥೆಗಳ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಿ, ಸಚಿವ ಸಂಪುಟ ಸಭೆಯಲ್ಲಿ ಶೀಘ್ರದಲ್ಲೇ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.


