ಬೆಂಗಳೂರು : ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಒಂದು ತಿಂಗಳು ಪೂರ್ಣಗೊಳಿಸಿದ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಪತ್ನಿ ಉಷಾ ಡಿ.ಕೆ. ಶಿವಕುಮಾರ್ ಹಾಗೂ ಸಹೋದರ ಡಿ.ಕೆ. ಸುರೇಶ್ ಅವರೊಂದಿಗೆ ಸಿದ್ದರಾಮಯ್ಯ ಅವರ ಮನೆಗೆ ತೆರಳಿದ ಸಿಎಂ, ಆತ್ಮೀಯ ಸಮಾಲೋಚನೆ ನಡೆಸಿದರು.
ಭೇಟಿಯ ವೇಳೆ ಸಿದ್ದರಾಮಯ್ಯ ಅವರಿಗೆ ಪುಷ್ಪಗುಚ್ಛ ನೀಡಿ ಗೌರವಿಸಿದ ಮುಖ್ಯಮಂತ್ರಿಗಳು, ಬಳಿಕ ಅವರೊಂದಿಗೆ ಉಪಾಹಾರ ಸೇವಿಸುತ್ತಾ ಸುದೀರ್ಘ ಚರ್ಚೆಯಲ್ಲಿ ತೊಡಗಿಕೊಂಡರು.
ಕಳೆದ ಒಂದು ತಿಂಗಳ ಅವಧಿಯಲ್ಲಿ ಸರ್ಕಾರ ಕೈಗೊಂಡ ಪ್ರಮುಖ ಜನಪರ ನಿರ್ಧಾರಗಳು, ಪ್ರಗತಿಯಲ್ಲಿರುವ ಅಭಿವೃದ್ಧಿ ಯೋಜನೆಗಳು ಹಾಗೂ ಮುಂದಿನ ಆಡಳಿತಾತ್ಮಕ ಸುಧಾರಣೆಗಳ ಕುರಿತು ಉಭಯ ನಾಯಕರು ಅನೌಪಚಾರಿಕವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸಿಎಂ ಕುಟುಂಬಸ್ಥರು ಕೂಡ ಮಾಜಿ ಮುಖ್ಯಮಂತ್ರಿಗಳಿಗೆ ಆತ್ಮೀಯವಾಗಿ ಶುಭ ಹಾರೈಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಡಿ.ಕೆ. ಶಿವಕುಮಾರ್, ಕರ್ನಾಟಕದ ಮುಖ್ಯಮಂತ್ರಿಯಾಗಿ ಒಂದು ತಿಂಗಳ ಸೇವೆಯನ್ನು ಪೂರ್ಣಗೊಳಿಸಿದ ಅಂಗವಾಗಿ ಇಂದು ಕುಟುಂಬದೊಂದಿಗೆ ಸಿದ್ದರಾಮಯ್ಯ ಅವರನ್ನು, ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಆಶೀರ್ವಾದವನ್ನು ಪಡೆದುಕೊಳ್ಳಲಾಯಿತು.
ಸಿದ್ದರಾಮಯ್ಯನವರ ದೂರದೃಷ್ಟಿಯ ನಾಯಕತ್ವ, ಅಪಾರ ಆಡಳಿತ ಅನುಭವ ಹಾಗೂ ನಾಡಿನ ಜನರ ಅಭಿವೃದ್ಧಿಯತ್ತ ಅವರ ಅಚಲ ಬದ್ಧತೆ ನಮ್ಮ ರಾಜ್ಯದ ಪ್ರಗತಿಯ ಪಯಣಕ್ಕೆ ಸದಾ ಬಲ ತುಂಬಲಿದೆ.
ರಾಜ್ಯದ ಸಮಗ್ರ ಅಭಿವೃದ್ಧಿ, ಜನಕಲ್ಯಾಣ ಮತ್ತು ಸುಭದ್ರ ಭವಿಷ್ಯ ನಿರ್ಮಾಣಕ್ಕೆ ಸಿದ್ದರಾಮಯ್ಯನವರ ಮಾರ್ಗದರ್ಶನ ಮತ್ತು ಆಶೀರ್ವಾದವು ಸದಾ ಪ್ರೇರಣೆಯಾಗಿದೆ.
ಸಿದ್ದರಾಮಯ್ಯನವರ ಆಶೀರ್ವಾದ ಮತ್ತು ನಿರಂತರ ಮಾರ್ಗದರ್ಶನಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.


