ಆಂಧ್ರಪ್ರದೇಶ: ಇಲ್ಲಿನ ಪಲ್ನಾಡು ಜಿಲ್ಲೆಯ (Amdra Pradesh) ನರಸರಾವ್‌ಪೇಟೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯಲೋಕವೇ ಬೆಚ್ಚಿಬೀಳುವಂತಹ ಅಚ್ಚರಿಯ ಘಟನೆಯೊಂದು ವರದಿಯಾಗಿದೆ.
ತೀವ್ರ ಹೊಟ್ಟೆ ಹಾಗೂ ಎದೆನೋವಿನಿಂದ ಬಳಲುತ್ತಿದ್ದ 33 ವರ್ಷದ ಮಹಿಳೆಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ, ಆಕೆಯ ಜಠರದಲ್ಲಿದ್ದ ವಿಚಿತ್ರ ವಸ್ತುಗಳನ್ನು ಕಂಡು (Viral News) ದಂಗಾಗಿದ್ದಾರೆ.
ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಮಹಿಳೆಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 14 ಪೆನ್ನುಗಳು, 5 ಮರದ ಚಮಚಗಳು ಹಾಗೂ ಒಂದು ದೊಡ್ಡ (Shocking) ಮೇಣದಬತ್ತಿಯನ್ನು ಹೊರತೆಗೆದು ಜೀವ ಉಳಿಸಲಾಗಿದೆ.
ನರಸರಾವ್‌ಪೇಟೆಯ ಮಾತೃಶ್ರೀ ಆಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಕರಾದ ಡಾ. ಪಿ. ರಾಮಚಂದ್ರ ರೆಡ್ಡಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಈ ಅಪರೂಪದ ವೈದ್ಯಕೀಯ ಪ್ರಕರಣದ ವಿವರ ನೀಡಿದ್ದಾರೆ.
ಪೆಟ್ಲೂರಿವಾರಿಪಾಲೆಂ ಗ್ರಾಮದ ನಿವಾಸಿಯಾಗಿರುವ ಈ ವಿವಾಹಿತ ಮಹಿಳೆಯನ್ನು ಶನಿವಾರ ತೀವ್ರ ಎದೆನೋವಿನ ಕಾರಣಕ್ಕೆ ಕುಟುಂಬದವರು ಆಸ್ಪತ್ರೆಗೆ ಕರೆತಂದಿದ್ದರು.
ಆರಂಭಿಕ ತಪಾಸಣೆ ಹಾಗೂ ಸ್ಕ್ಯಾನಿಂಗ್ ಪರೀಕ್ಷೆಗಳನ್ನು ನಡೆಸಿದಾಗ ಆಕೆಯ ಹೊಟ್ಟೆಯ ಒಳಭಾಗದಲ್ಲಿ ಹಲವು ಘನ ವಸ್ತುಗಳು ಇರುವುದು ಪತ್ತೆಯಾಯಿತು.
ಪರಿಸ್ಥಿತಿಯ ಗಂಭೀರತೆಯನ್ನುರಿತ ವೈದ್ಯರ ತಂಡ ತಕ್ಷಣವೇ ಲ್ಯಾಪ್ರೋಸ್ಕೋಪಿಕ್ (Laparoscopic) ವಿಧಾನದ ಮೂಲಕ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿತು. ಸೂಕ್ಷ್ಮ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯೊಳಗಿದ್ದ 14 ಪೆನ್ನುಗಳು, 5 ಮರದ ಸ್ಪೂನ್‌ಗಳು ಮತ್ತು ಮೇಣದಬತ್ತಿಯನ್ನು ಸುರಕ್ಷಿತವಾಗಿ ಆಚೆಗೆ ತೆಗೆಯಲಾಯಿತು.
ಈ ಪೈಕಿ ಒಂದು ಪೆನ್ನಿನ ಮುಚ್ಚಳ ತೆರೆದುಕೊಂಡಿದ್ದರಿಂದ, ಅದರ ಮೊನಚಾದ ತುದಿಯು ಹೊಟ್ಟೆಯ ಒಳಭಾಗದ ಚರ್ಮಕ್ಕೆ ಚುಚ್ಚಿ ಆಕೆಗೆ ತೀವ್ರ ನೋವು ಉಂಟುಮಾಡುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.


