ಧಾರವಾಡ : ಜನರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಪ್ರಜಾ ಸೇವೆ ಇಲಾಖೆಯನ್ನು ಸ್ಥಾಪಿಸಿದೆ. ಆ ಮೂಲಕ ಜನರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಕಾರ್ಮಿಕ, ಉದ್ಯೋಗ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು.
ಇಂದು ಕಲಘಟಗಿಯ ಜನತಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಆಯೋಜಿಸಿದ್ದ ಪ್ರಜಾ ಸೇವಾ ಆಂದೋಲನ ಸಭೆಗೆ ಕಾರ್ಮಿಕ, ಉದ್ಯೋಗ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಚಾಲನೆ ನೀಡಿದರು. 
ಜನರ ಮನೆ ಬಾಗಿಲಿಗೆ ಸರ್ಕಾರ ತೆರಳಲಿದೆ. ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರದಲ್ಲೇ ಪರಿಹರಿಸಲು ಕ್ರಮ ವಹಿಸಲಾಗುವುದು. ನಿಗದಿತ ಸಮಯದಲ್ಲಿ ಜನರ ಅಹವಾಲುಗಳನ್ನು ಇತ್ಯರ್ಥ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಸಹ ಪ್ರಜಾ ಸೇವಾ ಆಂದೋಲನ ಸಭೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.
ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, ನಮ್ಮ ಸರ್ಕಾರ ಜನರ ಪರವಾಗಿದೆ. ಜನರ ಕಣ್ಣಿರು ಒರೆಸುವ ಕೆಲಸ ಮಾಡುತ್ತದೆ. ಜನರಿಗೆ ಪ್ರಾಮಾಣಿಕ ಸೇವೆ ಸಲ್ಲಿಸಬೇಕು. ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ರೈತರು, ಕಾರ್ಮಿಕರು, ಮಹಿಳೆಯರ ಸಮಸ್ಯೆಗಳನ್ನು ಆಲಿಸಬೇಕಿದೆ. ನಿಗದಿತ ಸಮಯದಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅವರು ತಿಳಿಸಿದರು.
ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, 136 ಸೀಟುಗಳು ನೀಡಿದ ರಾಜ್ಯದ ಎಲ್ಲಾ ಜನರಿಗೆ ಧನ್ಯವಾದಗಳು. ರಾಜ್ಯದ ಜನರ ಋಣ ತೀರಿಸಬೇಕು. ಜನರ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳು ತಲುಪಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಕಾಲ ಕಾಲಕ್ಕೆ ಪರಿಹರಿಸಲಾಗುವುದು. ಜನರ ಹತ್ತಿರ ಸರ್ಕಾರ ತಲುಪಬೇಕು. ಆ ನಿಟ್ಟಿನಲ್ಲಿ ರಾಜ್ಯದಾದ್ಯಂತ ಪ್ರಜಾ ಸೇವಾ ಆಂದೋಲನ ಸಭೆ ನಡೆಸಲಾಗುವುದು. ಈಗಾಗಲೇ ಸುಮಾರು 42 ಕ್ಕೂ ಅಧಿಕ ಅರ್ಜಿಗಳನ್ನು ಜನರು ಸಲ್ಲಿಸಿದ್ದಾರೆ. ಜನರ ಅರ್ಜಿಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಈಗಾಗಲೇ ರಾಜ್ಯದ 101 ತಾಲೂಕು ಹಾಗೂ ನಿನ್ನೆ 24 ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇನ್ನಷ್ಟು ತಾಲೂಕುಗಳನ್ನು ಬರಗಾಲ ತಾಲೂಕುಗಳು ಎಂದು ಘೋಷಣೆ ಮಾಡಲಾಗುವುದು. ನಲವಡಿಯಲ್ಲಿ ಈಗಾಗಲೇ ಪ್ರಜಾ ಸೇವೆ ಅಭಿಯಾನ ನಡೆಸಲಾಗಿದೆ. ರೈತರಿಗೆ ಪರಿಹಾರ ಕೊಡಿಸಲು ಮುಂದಾಗುತ್ತೇವೆ. ಕೇಂದ್ರ ಸರ್ಕಾರದ ವರದಿ ಆಧಾರದ ಮೇಲೆ ಬರಗಾಲ ಘೋಷಣೆ ಮಾಡಲಾಗುತ್ತದೆ ಎಂದರು. 
ಶಾಸಕ ಎಫ್.ಎಚ್.ಜಕ್ಕಪ್ಪನವರ ಮಾತನಾಡಿ, ಜನರ ಬಾಗಿಲಿಗೆ ಸರ್ಕಾರ ಹೋಗಲಿದೆ. ಜನರ ಬಳಿಗೆ ಸರ್ಕಾರ ಹೋಗಿ ಸೇವೆಗಳನ್ನು ತಲುಪಿಸಲಾಗುವುದು. ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಪರಿಹರಿಸುವ ಕೆಲಸಗಳು ಆಗಬೇಕಿವೆ. ಪ್ರತಿ ದಿನ ತಾಲೂಕು ಕಚೇರಿ ಹಾಗೂ ಜಿಲ್ಲಾ ಕಚೇರಿಯಲ್ಲಿ ಜನರ ಸಮಸ್ಯೆಗಳನ್ನು ದಾಖಲಿಸಿ ಶೀಘ್ರದಲ್ಲೇ ಬಗೆಹರಿಸಬೇಕು. ಅಧಿಕಾರಿಗಳು ಪ್ರಜೆಗಳ ಸೇವೆ ಮಾಡಲು ಬದ್ಧರಾಗಬೇಕು. ಹೈನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡಬೇಕಿದೆ. ರಾಜ್ಯ ಸರ್ಕಾರ ಮೋಡ ಬಿತ್ತನೆಗೆ ಮುಂದಾಗಿದೆ. ಎಲ್ಲರ ಮನೆಮನೆಗೆ ಪ್ರಜಾ ಸೇವೆ ತಲುಪಬೇಕು ಎಂದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಪಣೆ ಮಾಡಿದರು. ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ವಿಶೇಷಚೇತನರಿಗೆ ತ್ರಿಚಕ್ರ ವಾಹನ, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ವಿತರಣೆ ಮಾಡಲಾಯಿತು. ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಾಯಿತು.
ಇಂದು ಕಲಘಟಗಿಯಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಸಭೆಯಲ್ಲಿ ಸಾರ್ವಜನಿಕರಿಂದ ಒಟ್ಟಾರೆಯಾಗಿ 417 ಅಹವಾಲುಗಳು ಸಲ್ಲಿಕೆಯಾದವು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 132, ಕಂದಾಯ ಇಲಾಖೆ 122, ವಸತಿ ಇಲಾಖೆ 25, ನಗರಾಭಿವೃದ್ಧಿ ಇಲಾಖೆ 20, ಕಾರ್ಮಿಕ ಇಲಾಖೆ 18, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 17, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿಶೇಷಚೇತನರ ಹಿರಿಯ ನಾಗರಿಕರ ಇಲಾಖೆ 12, ಕೌಶಲ್ಯಾಭಿವೃದ್ಧಿ ಇಲಾಖೆ 10, ಉನ್ನತ ಶಿಕ್ಷಣ ಇಲಾಖೆ 8, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇಂಧನ ಇಲಾಖೆ ತಲಾ 7, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಲಾ 6, ಲೋಕೋಪಯೋಗಿ ಇಲಾಖೆ 5, ಗೃಹ ಇಲಾಖೆ 4, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅರಣ್ಯ ಇಲಾಖೆ 3, ಸಮಾಜ ಕಲ್ಯಾಣ ಇಲಾಖೆ, ಹಣಕಾಸು ಇಲಾಖೆ, ಸಾರಿಗೆ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ತಲಾ 2, ಕೃಷಿ ಇಲಾಖೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಸಹಕಾರ ಇಲಾಖೆ ಮತ್ತು ಡಿಪಿಎಆರ್ ತಲಾ 1 ಅರ್ಜಿ ಸೇರಿದಂತೆ ಒಟ್ಟಾರೆಯಾಗಿ 417 ಅಹವಾಲುಗಳು ಸಲ್ಲಿಕೆ ಆಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಆರ್.ಪಾಟೀಲ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕುಮಾರ್ ಟಿ.ಎಚ್.ಎಂ., ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.


