ಬೆಂಗಳೂರು : ಕನ್ನಡದ ಸ್ಟಾರ್ ನಟ, ನೂರಾರು ಸಿನಿಮಾಗಳಲ್ಲಿ ನಟಿಸಿ ಸೆಂಚುರಿ ಸ್ಟಾರ್ ಎನಿಸಿಕೊಂಡ ಶಿವರಾಜ್‌ಕುಮಾರ್ ಜೈಲರ್ ಸಿನಿಮಾದ ಬಳಿಕ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಚಿತ್ರಗಳಲ್ಲಿಯೂ ನಟಿಸುತ್ತಿದ್ದು, ಅಲ್ಲಿ ಅಪಾರವಾದ ಬೇಡಿಕೆ ಪಡೆದುಕೊಂಡಿದ್ದಾರೆ.
ಜೈಲರ್ ಸಿನಿಮಾದಲ್ಲಿ ಶಿವಣ್ಣ ನಿರ್ವಹಿಸಿದ್ದ ಅತಿಥಿ ಪಾತ್ರ ಮಾಡಿದ ಇಂಪ್ಯಾಕ್ಟ್ ಎಷ್ಟರ ಮಟ್ಟಿಗೆ ಇತ್ತೆಂದರೆ ಇದೊಂದು ಪಾತ್ರ ಇಂದು ಶಿವಣ್ಣ ಅವರನ್ನು ಈ ಮಟ್ಟಿಗೆ ಕರೆತಂದಿದೆ.
ಮೆಗಾ ಪವರ್‌ಸ್ಟಾರ್ ರಾಮ್‌ಚರಣ್, ಧನುಷ್ ರೀತಿಯ ದೊಡ್ಡ ಸ್ಟಾರ್ ನಟರ ಚಿತ್ರಗಳಿಗೂ ಶಿವಣ್ಣ ಬೇಕು ಎನ್ನುವ ಮಟ್ಟಕ್ಕೆ ಫೇಮ್ ತಂದಿದೆ.
ಹೀಗೆ ತಮಿಳು ಹಾಗೂ ತೆಲುಗು ಚಿತ್ರರಂಗಗಳಲ್ಲಿ ಅಬ್ಬರಿಸುತ್ತಿರುವ ಶಿವರಾಜ್‌ಕುಮಾರ್ ಕನ್ನಡದಲ್ಲಿಯೂ ಸಹ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಕಬ್ಜ ಬಳಿಕ ಮತ್ತೆ ಆರ್ ಚಂದ್ರು ಜತೆ ಸಿನಿಮಾವೊಂದನ್ನು ಮಾಡಲು ಕೈ ಜೋಡಿಸಿದ್ದಾರೆ.
ಈ ಚಿತ್ರಕ್ಕೆ OM ( ಒರಿಜಿನಲ್ ಮಾನ್ಸ್ಟರ್ ) ಎಂಬ ಶೀರ್ಷಿಕೆಯನ್ನು ಇಡಲಾಗಿದ್ದು, ಈ ಚಿತ್ರದ ಮೂಲಕ ಶಿವಣ್ಣ ಬಾಲಿವುಡ್ ಪ್ರವೇಶವನ್ನೂ ಸಹ ಮಾಡಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಈ ಚಿತ್ರವನ್ನು ಕನ್ನಡದ ಜತೆಗೆ ಹಿಂದಿಗೂ ಸಹ ಡಬ್ ಮಾಡಿ ದೊಡ್ಡದಾಗಿ ಬಿಡುಗಡೆ ಮಾಡಲು ಸಜ್ಜಾಗಿದ್ದು, ನಿನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಹಿಂದಿ ಡಬಿಂಗ್ ಕುರಿತು ಪ್ರಶ್ನೆಗಳು ಎದ್ದವು.
ಹಿಂದಿಗೂ ಸಹ ಚಿತ್ರ ಡಬ್ ಆಗುತ್ತಿರುವುದರಿಂದ ಶಿವಣ್ಣ ಇದಕ್ಕೆ ಹೇಗೆ ತಯಾರಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಯಾಕೆ? ನನ್ನ ಸೆಕೆಂಡ್ ಲಾಂಗ್‌ವೇಜ್ ಹಿಂದಿ. ಮೇ ಹಿಂದಿ ಬಾತ್ ಕರ್ ಸಕ್ತಾ ಹು ಯಾರ್. ಹಿಂದಿ ಸುಲಭದ ಭಾಷೆ ರೀ, ರಾಷ್ಟ್ರೀಯ ಭಾಷೆ ಬರದೇ ಏನು ಬರುತ್ತೆ ಬಿಡಿ’ ಎಂದಿದ್ದಾರೆ.


