ಬೆಳಗಾವಿ: ಜಿಲ್ಲೆಯ ಖಾನಾಪುರದಲ್ಲಿ ಎಸ್‌ಐಆರ್ (SIR) ವಿಷಯಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಮಧ್ಯೆ ಸಭೆಯಲ್ಲೇ ತೀವ್ರ ಗಲಾಟೆ ನಡೆದಿರುವ ಘಟನೆ ವರದಿಯಾಗಿದೆ.
ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಖಾನಾಪುರ ತಹಶೀಲ್ದಾರ್ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಎಸ್‌ಐಆರ್ ವಿಷಯದ ಕುರಿತು ಚರ್ಚೆ ನಡೆಯುತ್ತಿದ್ದಾಗ, ತಹಶೀಲ್ದಾರ್ ಮತ್ತು ಪಿಡಿಒಗಳ ನಡುವೆ ಸಣ್ಣದಾಗಿ ಆರಂಭವಾದ ವಾಗ್ವಾದವು ಉಗ್ರ ರೂಪ ಪಡೆದುಕೊಂಡಿದೆ. ಮಾತಿಗೆ ಮಾತು ಬೆಳೆದು ಇಬ್ಬರೂ ಪರಸ್ಪರ ಏಕವಚನದಲ್ಲೇ ನಿಂದಿಸಿಕೊಂಡು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.
ಪಿಡಿಒಗಳ ಆಕ್ರೋಶ
ಘಟನೆಯಿಂದ ತೀವ್ರ ಅಸಮಾಧಾನಗೊಂಡ ಪಿಡಿಒಗಳು ತಕ್ಷಣವೇ ಸಭೆಯಿಂದ ಹೊರನಡೆದು ತಹಶೀಲ್ದಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
"ತಹಶೀಲ್ದಾರ್ ಅವರು ಸಭೆಯಲ್ಲಿ ತಮ್ಮ ದರ್ಪವನ್ನು ಪ್ರದರ್ಶಿಸುತ್ತಿದ್ದಾರೆ ಮತ್ತು ಅಧಿಕಾರಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ" ಎಂದು ಕೆಲವು ಪಿಡಿಒಗಳು ಗಂಭೀರವಾಗಿ ಆರೋಪಿಸಿದ್ದಾರೆ.
ತಹಶೀಲ್ದಾರ್ ಸ್ಪಷ್ಟನೆ
ಈ ಕುರಿತು ಪ್ರತಿಕ್ರಿಯಿಸಿರುವ ತಹಶೀಲ್ದಾರ್, ಪಿಡಿಒಗಳ ವಿರುದ್ಧವೇ ತಿರುಗಿಬಿದ್ದಿದ್ದಾರೆ. "ಪಿಡಿಒಗಳು ತಮಗೆ ವಹಿಸಲಾಗಿರುವ ಎಸ್‌ಐಆರ್ ಕರ್ತವ್ಯಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿಲ್ಲ. ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ" ಎಂದು ಅವರು ಪ್ರತಿಯಾಗಿ ಆರೋಪಿಸಿದ್ದಾರೆ.


