ಹುಬ್ಬಳ್ಳಿ:ಉತ್ತರ ಕರ್ನಾಟಕದ ರೋಗಿಗಳಿಗೆ ವಿಶ್ವದರ್ಜೆಯ ಮತ್ತು ವಿಶೇಷ ಕ್ಯಾನ್ಸರ್ ಚಿಕಿತ್ಸೆ ನೀಡುತ್ತಿರುವ ಹುಬ್ಬಳ್ಳಿಯ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್ ಈಗ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ತನ್ನ ಮೊದಲ ವರ್ಷದಲ್ಲಿ ಈ ಕೇಂದ್ರ, ಈ ಭಾಗದ 800ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, 50ಕ್ಕೂ ಹೆಚ್ಚು ಸಂಕೀರ್ಣ ಸರ್ಫೇಸ್ ಗೈಡೆಡ್ ರೇಡಿಯೇಷನ್ ಥೆರಪಿ (SGRT) ಚಿಕಿತ್ಸೆಗಳನ್ನು ನಡೆಸಿದೆ. ಅಲ್ಲದೆ, 430 ಸಮುದಾಯ ಕಾರ್ಯಕ್ರಮಗಳ ಮೂಲಕ 1,775 ಜನರನ್ನು ತಲುಪುವ ಮೂಲಕ, ಈ ಭಾಗದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಮತ್ತು ಆರಂಭಿಕ ಹಂತದಲ್ಲೇ ರೋಗ ಪತ್ತೆಹಚ್ಚುವ ಕಾರ್ಯವನ್ನು ಬಲಪಡಿಸಿದೆ.
ಕಳೆದ ಒಂದು ವರ್ಷದಲ್ಲಿ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್, ರೇಡಿಯೇಷನ್ ಆಂಕಾಲಜಿ, ಸರ್ಜಿಕಲ್ ಆಂಕಾಲಜಿ ಮತ್ತು ಮೆಡಿಕಲ್ ಆಂಕಾಲಜಿ ವಿಭಾಗಗಳಲ್ಲಿ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಸೇವೆಗಳನ್ನು ಒದಗಿಸಿದೆ. ಪ್ರತಿ ವಿಭಾಗದಲ್ಲೂ ತಲಾ ಇಬ್ಬರು ತಜ್ಞರಂತೆ ಒಟ್ಟು ಆರು ಸಮಾಲೋಚಕ ವೈದ್ಯರು ಈ ಸೇವೆಗೆ ಬೆನ್ನೆಲುಬಾಗಿದ್ದಾರೆ. ಈ ಬಹು-ವಿಭಾಗೀಯ ವ್ಯವಸ್ಥೆಯಿಂದಾಗಿ ರೋಗಿಗಳಿಗೆ ಒಂದೇ ಸೂರಿನಡಿ ಸಮಗ್ರ ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಸಾಧ್ಯವಾಗಿದೆ.
ತನ್ನ ಸಮುದಾಯ ಸಂಪರ್ಕ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ, 75 ಕ್ಯಾನ್ಸರ್ ಜಾಗೃತಿ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳು ಮತ್ತು 355 ಹೊರರೋಗಿ ಶಿಬಿರಗಳನ್ನು ನಡೆಸಿದೆ. ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಮತ್ತು ಅದರ ನಿರ್ವಹಣೆಯ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ, ಕ್ಯಾನ್ಸರ್ ತಡೆಗಟ್ಟುವಿಕೆಯ ಕುರಿತು ಕೇಂದ್ರ ಜಾಗೃತಿ ಮೂಡಿಸುತ್ತಿದೆ.
ಈ ಕೇಂದ್ರ, ಅತ್ಯಾಧುನಿಕ 'ಎಲೆಕ್ಟಾ ವರ್ಸಾ ಎಚ್‌ಡಿ ಲೀನಿಯರ್ ಆಕ್ಸಿಲರೇಟರ್' (Elekta Versa HD Linear Accelerator) ಯಂತ್ರವನ್ನು ಹೊಂದಿದೆ. ಇದು ಸರ್ಫೇಸ್ ಗೈಡೆಡ್ ರೇಡಿಯೇಷನ್ ಥೆರಪಿ (SGRT), ಸ್ಟೀರಿಯೊಟ್ಯಾಕ್ಟಿಕ್ ಬಾಡಿ ರೇಡಿಯೇಷನ್ ಥೆರಪಿ (SBRT), ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಸರ್ಜರಿ (SRS), ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಥೆರಪಿ (SRT) ಮತ್ತು ಇಮೇಜ್ ಗೈಡೆಡ್ ರೇಡಿಯೇಷನ್ ಥೆರಪಿ (IGRT) ಯಂತಹ ಅತ್ಯಾಧುನಿಕ ರೇಡಿಯೇಷನ್ ಚಿಕಿತ್ಸೆಗಳನ್ನು ನೀಡುತ್ತದೆ. ಈ ತಂತ್ರಜ್ಞಾನಗಳು ಗಡ್ಡೆಯನ್ನು ಅತ್ಯಂತ ನಿಖರವಾಗಿ ಮತ್ತು ಸೂಕ್ಷ್ಮವಾಗಿ ಗುರಿಯಾಗಿಸಲು ನೆರವಾಗುತ್ತವೆ. ಇದರಿಂದಾಗಿ ಆರೋಗ್ಯಕರ ಜೀವಕೋಶಗಳ ಮೇಲೆ ಬೀಳುವ ವಿಕಿರಣದ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.
ಇದಲ್ಲದೆ, ಕೇಂದ್ರವು, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ವಿಜಯಪುರ, ರಾಯಚೂರು, ಕೊಪ್ಪಳ, ಬಳ್ಳಾರಿ, ಉತ್ತರ ಕನ್ನಡ ಸೇರಿದಂತೆ ಉತ್ತರ ಕರ್ನಾಟಕದ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳ ರೋಗಿಗಳಿಗೂ ತನ್ನ ಕ್ಯಾನ್ಸರ್ ಚಿಕಿತ್ಸಾ ಸೇವೆಗಳನ್ನು ವಿಸ್ತರಿಸಿದೆ.
ಸಮುದಾಯ ಸಂಪರ್ಕ ಕಾರ್ಯಕ್ರಮಗಳನ್ನು ವಿಸ್ತರಿಸುವುದು, ಸುಧಾರಿತ ರೇಡಿಯೇಷನ್ ಚಿಕಿತ್ಸಾ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಹಾಗೂ ವರ್ಚುವಲ್ ಟ್ಯೂಮರ್ ಬೋರ್ಡ್ ಬೆಂಬಲ, ಟೆಲಿ-ಆಂಕಾಲಜಿ ಸೇವೆಗಳು ಮತ್ತು ಹಬ್-ಆಂಡ್-ಸ್ಪೋಕ್ (hub-and-spoke) ಕ್ಯಾನ್ಸರ್ ಆರೈಕೆ ಮಾದರಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಒಟ್ಟಾರೆ ಕ್ಯಾನ್ಸರ್ ಸೇವೆಗಳನ್ನು ಇನ್ನಷ್ಟು ಬಲಪಡಿಸುವುದು ಎಚ್‌ಸಿಜಿ ಕ್ಯಾನ್ಸರ್ ಸೆಂಟರ್‌ನ ಮುಂದಿನ ಯೋಜನೆಯಾಗಿದೆ. ಉತ್ತರ ಕರ್ನಾಟಕದ ನಾಗರಿಕರಿಗೆ ವಿಶೇಷ ಕ್ಯಾನ್ಸರ್ ಚಿಕಿತ್ಸೆ, ಆರಂಭಿಕ ರೋಗ ಪತ್ತೆ ಮತ್ತು ನಿಖರ ಚಿಕಿತ್ಸೆ ಸುಲಭವಾಗಿ ಸಿಗುವಂತೆ ಮಾಡಲು ಮೆಡಿಕಲ್, ಸರ್ಜಿಕಲ್ ಮತ್ತು ರೇಡಿಯೇಷನ್ ಆಂಕಾಲಜಿ ಚಿಕಿತ್ಸೆಯನ್ನು ವಿಸ್ತರಿಸುವತ್ತ ಕೇಂದ್ರ ಗಮನಹರಿಸುತ್ತಿದೆ.
ವೇದಿಕೆಯ ಮೇಲೆ ಡಾ ಮಿಲಿಂದ್ ಶೆಟ್ಟಿ, ಡಾ ಅಬ್ದುಲ್ ರಹೀಮ್, ಡಾ ರುದ್ರೇಶ್ ತಬಲಿ, ಡಾ ಪ್ರೇಮ, ಡಾ ಆದರ್ಶ ಹೆಗಡೆ, ಡಾ ಶ್ರೀ ಕಾಂತ ಉಪಸ್ತಿತರಿದ್ದರು
ವರದಿ:ಸುಧೀರ್ ಕುಲಕರ್ಣಿ

