ಮೇಕ್ಸಿಕೋಸಿಟಿ: ಮೆಕ್ಸಿಕೋ (Mexico) ನಗರದ ಸಮೀಪ ನಡೆದ ಪುರಾತತ್ವ ಉತ್ಖನನದಲ್ಲಿ ಸುಮಾರು 13,000 ವರ್ಷಗಳಷ್ಟು ಹಳೆಯದಾದ ಪುರಾತನ ಮಾನವನ ಅಸ್ಥಿಪಂಜರ ಪತ್ತೆಯಾಗಿದೆ. '
ಯೋಟ್ಜಿನ್' (Yotzin) ಎಂದು ಹೆಸರಿಸಲಾಗಿರುವ ಈ ಅಸ್ಥಿಪಂಜರವು (Ancient Skeleton) ಮೆಕ್ಸಿಕೋ ಜಲಾನಯನ ಪ್ರದೇಶದಲ್ಲಿ ಇದುವರೆಗೆ ಪತ್ತೆಯಾದ ಅತ್ಯಂತ ಹಳೆಯ ಮಾನವ ಅವಶೇಷಗಳಲ್ಲಿ ಒಂದಾಗಿದೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ.
ವಿಮಾನ ನಿಲ್ದಾಣದ ಜಾಗದಲ್ಲಿ ಪತ್ತೆಯಾದ 'ಯೋಟ್ಜಿನ್'
2021ರಲ್ಲಿ ಫೆಲಿಪೆ ಏಂಜೆಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಸ್ಥಳದಲ್ಲಿ ಪುರಾತತ್ವಶಾಸ್ತ್ರಜ್ಞ ಇಸ್ರೇಲ್ ಪೆನಾ ಪ್ಯಾಸ್ಕುವಲ್ ಈ ಅಸ್ಥಿಪಂಜರವನ್ನು ಪತ್ತೆಹಚ್ಚಿದ್ದರು.
ಮೆಕ್ಸಿಕೋದ ರಾಷ್ಟ್ರೀಯ ಮಾನವಶಾಸ್ತ್ರ ಮತ್ತು ಇತಿಹಾಸ ಸಂಸ್ಥೆಯ (INAH) ಪ್ರಕಾರ, ಎರಡು ಪ್ರತ್ಯೇಕ ವೈಜ್ಞಾನಿಕ ಪರೀಕ್ಷೆಗಳಿಂದ ಈ ಅಸ್ಥಿಪಂಜರವು 13,087 ರಿಂದ 11,700 ವರ್ಷಗಳಷ್ಟು ಹಿಂದಿನದು ಎಂದು ತಿಳಿದುಬಂದಿದೆ.
ಆರಂಭದಲ್ಲಿ ಮೂಳೆಗಳ ಗಾತ್ರವನ್ನು ಕಂಡು ಇದು ಪ್ರಾಗೈತಿಹಾಸಿಕ ಒಂಟೆಯ ಅವಶೇಷವಿರಬಹುದು ಎಂದು ಭಾವಿಸಲಾಗಿತ್ತು. ಆದರೆ ಉತ್ಖನನ ಮುಂದುವರಿದಂತೆ ಇದು ಮಾನವನ ಅಸ್ಥಿಪಂಜರ ಎಂಬುದು ಸ್ಪಷ್ಟವಾಯಿತು.

