ಬೀದರ್: ಬಸವಕಲ್ಯಾಣದಲ್ಲಿ (Bidar) ಇಂದಿನಿಂದ ಆರಂಭವಾಗಿರುವ ಎರಡು ದಿನಗಳ 47ನೇ ಅನುಭವ ಮಂಟಪ ಉತ್ಸವದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ತೀವ್ರ ಗದ್ದಲ ಉಂಟಾಗಿದೆ.
ಉದ್ಘಾಟನಾ ಭಾಷಣದ ವೇಳೆ ಬಸವಾಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರು ಕಾರ್ಯಕ್ರಮವನ್ನು ಅರ್ಧಕ್ಕೇ ಮೊಟಕುಗೊಳಿಸಿ ಹೊರನಡೆದ ಪ್ರಸಂಗ ನಡೆದಿದೆ.
ಉದ್ಘಾಟನಾ ಭಾಷಣದ ವೇಳೆ ಶುರುವಾದ ವಿರೋಧ
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಆಯೋಜಿಸಲಾಗಿರುವ 47ನೇ ಅನುಭವ ಮಂಟಪ ಉತ್ಸವಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಚಾಲನೆ ನೀಡಿದರು.
ಉದ್ಘಾಟನೆಯ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ಬೇಡ, ನಾವೆಲ್ಲರೂ ಹಿಂದೂಗಳು ಎಂಬ ಮಾತನ್ನು ಪ್ರಸ್ತಾಪಿಸಿದರು. ವಿಜಯೇಂದ್ರ ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಸಭೆಯಲ್ಲಿದ್ದ ಬಸವಾಭಿಮಾನಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ಬೇಕೇ ಬೇಕು ಎಂದು ಆಗ್ರಹಿಸಿದ ಬಸವಾಭಿಮಾನಿಗಳು, ವಿಜಯೇಂದ್ರ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಭಾಷಣಕ್ಕೆ ಅಡ್ಡಿಪಡಿಸಿದರು.
ಇದರಿಂದಾಗಿ ವೇದಿಕೆಯ ಮುಂಭಾಗದಲ್ಲಿ ಮಾತಿನ ಚಕಮಕಿ ಹಾಗೂ ಗಲಾಟೆ-ಗದ್ದಲದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ತಿಳಿಯಾಗದ ಹಿನ್ನೆಲೆಯಲ್ಲಿ, ಅಸಮಾಧಾನಗೊಂಡ ಬಿ.ವೈ. ವಿಜಯೇಂದ್ರ ಅವರು ಕಾರ್ಯಕ್ರಮವನ್ನು ಅರ್ಧಕ್ಕೇ ಬಿಟ್ಟು ಎದ್ದು ಹೊರನಡೆದರು.

