ಈಜಿಪ್ಟ್: ರಾಜಧಾನಿ ಕೈರೋದ ಪ್ರಮುಖ ಹೆದ್ದಾರಿಯಲ್ಲಿ ಇಂಧನ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತಕ್ಕೀಡಾಗಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.
ಈ ಭೀಕರ ದುರಂತದಲ್ಲಿ ಕನಿಷ್ಠ 31 ಮಂದಿ ಮೃತಪಟ್ಟಿದ್ದು, 21ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಘಟನೆಯಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಡಜನ್ ಗೂ ಹೆಚ್ಚು ಕಾರುಗಳು ಹಾಗೂ ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ.
ಈಜಿಪ್ಟ್‌ನ ರಾಜಧಾನಿ ಕೈರೋವನ್ನು ಸುತ್ತುವರಿದಿರುವ ರಿಂಗ್ ರೋಡ್ ಹೆದ್ದಾರಿಯಲ್ಲಿ ಬುಧವಾರ ಈ ದುರಂತ ಸಂಭವಿಸಿದೆ. ಇಂಧನ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತಕ್ಕೀಡಾದ ಬಳಿಕ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಸುತ್ತಮುತ್ತಲಿನ ವಾಹನಗಳಿಗೆ ವ್ಯಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಿಜಾ ಪ್ರದೇಶದ ವಾರಾಕ್ (Waraq) ಎಂಬ ಜನನಿಬಿಡ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಇಂಧನ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರುಗಳು ಮತ್ತು ಬೈಕ್‌ಗಳಿಗೆ ಬೆಂಕಿ ವ್ಯಾಪಿಸಿದೆ. ವಾಹನಗಳು ಒಂದಕ್ಕೊಂದು ಸಿಲುಕಿಕೊಂಡಿದ್ದರಿಂದ ಬೆಂಕಿಯ ಕೆನ್ನಾಲಿಗೆ ವೇಗವಾಗಿ ಹರಡಿದೆ.
ಘಟನೆಯ ಭೀಕರತೆಯಿಂದ ಸ್ಥಳದಲ್ಲಿ ಭಾರಿ ಆತಂಕ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನೂರಾರು ಜನರು ಘಟನಾ ಸ್ಥಳದ ಸುತ್ತ ಜಮಾಯಿಸಿದ್ದರು.
ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ರಕ್ಷಣಾ ಸಿಬ್ಬಂದಿ ಬೆಂಕಿಗಾಹುತಿಯಾದ ವಾಹನಗಳೊಳಗಿದ್ದವರನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸಿದರು.
ಅಪಘಾತದ ವೇಳೆ ಹೆದ್ದಾರಿಯಲ್ಲಿ ಸಿಲುಕಿಕೊಂಡಿದ್ದ ಅಹ್ಮದ್ ಸಮೀರ್ ಎಂಬ ಪ್ರತ್ಯಕ್ಷದರ್ಶಿ, ಇಂಧನ ಟ್ಯಾಂಕರ್ ಸೇರಿದಂತೆ ಹಲವು ವಾಹನಗಳು ಬೆಂಕಿಯಲ್ಲಿ ಉರಿಯುತ್ತಿದ್ದುದನ್ನು ಕಂಡಿದ್ದಾಗಿ ತಿಳಿಸಿದ್ದಾರೆ. ಸುಟ್ಟು ಕರಕಲಾಗಿದ್ದ ವಾಹನಗಳಿಂದ ಕನಿಷ್ಠ ಎಂಟು ಮೃತದೇಹಗಳನ್ನು ಹೊರತೆಗೆಯುವುದನ್ನು ನೋಡಿದ್ದಾಗಿ ಅವರು ಹೇಳಿದ್ದಾರೆ.

