8 ಬಾರಿ ಶಾಸಕರಾದ್ರೂ ಜಿಲ್ಲೆಗೆ ಕೊಡುಗೆ ಏನು? - ಕಾಂಗ್ರೆಸ್ ವಿರುದ್ಧ ಕಿಡಿ
ಸೇಡಂ: ಕಲಬುರಗಿ ಜಿಲ್ಲೆಯ ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ "ಜನರೊಂದಿಗೆ ಜನತಾದಳ" ಸದಸ್ಯತ್ವ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು.
ತಾಲ್ಲೂಕಿನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಬಳಿ ಕ್ರೇನ್ ಮೂಲಕ ಬೃಹತ್ ಗಾತ್ರದ ಹೂವಿನ ಹಾರ ಹಾಕಿ, ಸಹಸ್ರಾರು ಯುವಕರ ಬೈಕ್ ರ್ಯಾಲಿ, ದಾರಿಯುದ್ದಕ್ಕೂ ಪಟಾಕಿ, ಹೂಮಳೆಯೊಂದಿಗೆ ಯುವ ನಾಯಕರನ್ನು ಬರಮಾಡಿಕೊಳ್ಳಲಾಯಿತು. ನಂತರ ರೈಲ್ವೆ ಸ್ಟೇಷನ್ ಬಳಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಶ್ರೀ ಕೊತ್ತಲ ಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಸ್ವಾಮಿ ದರ್ಶನ ಪಡೆದು, ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
"ಸೇಡಂನಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಸಾಗಲಿ. ದೃತಿಗೆಡಬೇಡಿ. ದೇವೇಗೌಡರು ಈ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿದ್ದಾರೆ. ನೀವು ನಿಮ್ಮ ಹೋರಾಟ ಮುಂದುವರೆಸಿ. ದೇವೇಗೌಡರ ಕುಟುಂಬ ಬಿಸಿಲಿಗೆ, ಮಳೆಗೆ, ಚಳಿಗೆ ಹೆದರಿ ಮನೆಯಲ್ಲಿ ಕೂರುವವರಲ್ಲ. 25 ವರ್ಷದ ರಜತ ಮಹೋತ್ಸವ ಆಚರಣೆ ಮಾಡುತ್ತಿದ್ದೇವೆ, ಮುಂದೆ ಸುವರ್ಣ ಮಹೋತ್ಸವ ಮಾಡೋಣ" ಎಂದು ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು.
"8 ಬಾರಿ ಶಾಸಕರಾದ್ರೂ ಜಿಲ್ಲೆಗೆ ಕೊಡುಗೆ ಏನು?" "ಜಿಲ್ಲೆಯಲ್ಲಿ ಎಂಟು ಬಾರಿ ಶಾಸಕರಾದರು, ಜಿಲ್ಲೆಗೆ ಕೊಡುಗೆ ಏನು? ನಿಮ್ಮ ರಾಜಕೀಯ ಲಾಭಕ್ಕಾಗಿ ಜಿಲ್ಲೆಯನ್ನ ಉಪಯೋಗಿಸಿಕೊಳ್ಳುತ್ತಿದ್ದಾರೆ. ರಸ್ತೆ ಗುಂಡಿ ಮುಚ್ಚೋಕೆ ದುಡ್ಡಿಲ್ಲ, ಇನ್ನ ಕೆ,ಕೆ,ಆರ್,ಡಿ,ಬಿ ಗೆ 35 ಕೋಟಿ ಎಲ್ಲಿಂದ ತರುತ್ತಾರೆ? ಕಲ್ಯಾಣ ಕರ್ನಾಟಕದ ಮುಗ್ಧ ಜನತೆಗೆ ಮೋಸ ಮಾಡಿದ್ದು ಸಾಕು. ಮೊದಲು ಜಿಲ್ಲೆಯನ್ನು ಅಭಿವೃದ್ಧಿ ಮಾಡಿ" ಎಂದು ಮಲ್ಲಿಕಾರ್ಜುನ್ ಖರ್ಗೆ ಅವರ ವಿರುದ್ಧ ಗುಡುಗಿದರು.
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ರಿಸಲ್ಟ್ ಕುಸಿತ - ಶಿಕ್ಷಕರ ನೇಮಕಾತಿ ಇಲ್ಲ.ಕಲಬುರಗಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ರಿಸಲ್ಟ್ ಬಂದಿದೆ. ಕಲಬುರಗಿ ಹಿಂದೆ ಉಳಿದಿದೆ. ಶಿಕ್ಷಕರ ನೇಮಕ ಮಾಡಿಲ್ಲ. ಕಳೆದ ಮೂರು ವರ್ಷದಲ್ಲಿ 18 ಸಾವಿರ ಶಿಕ್ಷಕರನ್ನು ನೇಮಕ ಮಾಡಬೇಕಿತ್ತು. ಇದು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಈ ಸರ್ಕಾರ ಚೆಲ್ಲಾಟ ಆಡುತ್ತಿದೆ. ವಿದ್ಯಾರ್ಥಿಗಳ ಭವಿಷ್ಯ ಇವರ ಕೈಯಲ್ಲಿದೆಯೇ?" ಎಂದು ಪ್ರಶ್ನಿಸಿದರು.
ಭೂಮಿ ಕಂಪನಿಗೆ ಕೊಟ್ರಿ, ನಿಮಗೆ ಸಿಕ್ಕಿದ್ದೇನು?ಇಲ್ಲಿರುವ ಕಂಪನಿಗಳಿಗೆ ನಿಮ್ಮ ಭೂಮಿಯನ್ನು ಕೊಟ್ಟಿದ್ದೀರಿ. ಅದ್ರಿಂದ ನಿಮಗೆ ಸಿಕ್ಕಿರುವ ಕೊಡುಗೆ ಏನು? ನಿಮಗೆ ಸ್ವಾಭಿಮಾನದ ಬದುಕು ಕೊಡಲಾಗಿದೆಯೇ? ಕಂಪನಿಗಳು ಬಂದ್ರೂ ಸ್ಥಳೀಯರಿಗೆ ಉದ್ಯೋಗ ಇಲ್ಲ, ಅಭಿವೃದ್ಧಿ ಇಲ್ಲ" ನಿಮಗೆ ಉದ್ಯೋಗ ನೀಡದ ಕಂಪನಿಗಳು ಯಾಕೆ ಬೇಕು.? ಎಂದು ಆಕ್ರೋಶ ವ್ಯಕ್ತಪಡಿಸಿದರು.
"ದೇವೇಗೌಡರ ದೂರದೃಷ್ಟಿ - ಭೀಮಾ ನದಿ ಡ್ಯಾಂ:"
"ಕಲ್ಯಾಣ ಕರ್ನಾಟಕ ಭಾಗದಲ್ಲಿ ಭೀಮಾ ನದಿಯ ಮೂಲಕ ಸಾಕಷ್ಟು ಡ್ಯಾಂಗಳನ್ನು ನಿರ್ಮಾಣ ಮಾಡಿದ್ದು ದೇವೇಗೌಡರ ದೂರದೃಷ್ಟಿ. ರೈತರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೊಟ್ಟವರು ದೇವೇಗೌಡರು" ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಕೋರ್ ಕಮಿಟಿ ಅಧ್ಯಕ್ಷರಾದ ಜೆ.ಕೆ ಕೃಷ್ಣಾರೆಡ್ಡಿ, ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್,ರಾಜ ವೆಂಕಟಪ್ಪ ನಾಯಕ್, ಜಿಲ್ಲಾಧ್ಯಕ್ಷರಾದ ಬಾಲರಾಜ್ ಗುತ್ತೇದಾರ್, ಶಿವಕುಮಾರ್ ನಾಟಿಕಾರ್, ಸೂರಜ್ ನಾಯ್ಕ್, ತಾಲ್ಲೂಕು ಅಧ್ಯಕ್ಷರಾದ ವೆಂಕಟರೆಡ್ಡಿ ಗಾಡ್ದನ್, ಕೃಷ್ಣಾರೆಡ್ಡಿ, ನಾಸಿರ್ ಹುಸೇನ್, ಜಗನಾಥ್ ರೆಡ್ಡಿ ಗೊಟೂರ್, ಮಹಿಳಾ ತಾಲ್ಲೂಕು ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ, ಶ್ರೀಮತಿ ಮಹೇಶ್ವರಿ ವಾಲೆ, ಶ್ರೀಮತಿ ಪಲ್ಲವಿ ಬಾಲರಾಜ್ ಗುತ್ತೇದಾರ್ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು, ಸಹಸ್ರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್.

