ಉತ್ತರ ಪ್ರದೇಶ : ಬಿಜ್ನೋರ್‌ನಲ್ಲಿ ಸಾರ್ವಜನಿಕ ಮತ್ತು ನಾಗರಿಕ ಸಮಸ್ಯೆಗಳನ್ನು ಬೆಳಕಿಗೆ ತರುತ್ತಿದ್ದ ಯೂಟ್ಯೂಬರ್ ಹಾಗೂ ಡಿಜಿಟಲ್ ಪತ್ರಕರ್ತನ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷೆಯ ಪತಿ ಮತ್ತು ಆತನ ಬೆಂಬಲಿಗರು ಹಲ್ಲೆ (Assault) ನಡೆಸಿ, ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ( Uttar Pradesh) ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಕೊತ್ವಾಲಿ ದೇಹತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 11 ರಂದು ಈ ದೌರ್ಜನ್ಯ ನಡೆದಿದೆ. ಸಂತ್ರಸ್ತ ಯೂಟ್ಯೂಬರ್ ಸ್ಥಳೀಯ ಗ್ರಾಮದ ಹಾನಿಗೊಳಗಾದ ರಸ್ತೆಗಳು, ಚರಂಡಿ ಹಾಗೂ ಇತರ ಮೂಲಸೌಕರ್ಯಗಳ ಕೊರತೆಯ ಕುರಿತು ವೀಡಿಯೊಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಇದೇ ವಿಚಾರವಾಗಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಶುಕ್ರವಾರ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಮಧ್ಯಾಹ್ನ ಸುಮಾರು 2 ಗಂಟೆಗೆ ಹೊರಬರುತ್ತಿದ್ದಾಗ ರಾಮುನ್ ಅಲಿಯಾಸ್ ಮುನ್ಷಿ ಎಂಬ ವ್ಯಕ್ತಿ ಅವರನ್ನು ತಡೆದು, "ನೀನೇನು ದೊಡ್ಡ ಪತ್ರಕರ್ತನ ಅಂದುಕೊಂಡಿದ್ದೀಯಾ? ಊರಿನ ವೀಡಿಯೊಗಳನ್ನು ಮಾಡುತ್ತೀಯಾ?" ಎಂದು ಗದರಿಸಿದ್ದಾನೆ.
ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷೆಯ ಪತಿ ಇಮ್ರಾನ್, ಆತನ ಸಹೋದರ ಫುರ್ಕಾನ್ ಹಾಗೂ ಶಾದ್ಮಾನ್, ಜೀಶಾನ್ ಮತ್ತು ಅಶ್ರಫ್ ಎಂಬುವವರು ಯೂಟ್ಯೂಬರ್ ಮೇಲೆ ಕೆಟ್ಟ ಮಾತುಗಳಿಂದ ನಿಂದಿಸಿ, ತಳ್ಳಿ ಹಲ್ಲೆ ನಡೆಸಿದ್ದಾರೆ.
ಇಷ್ಟೇ ಅಲ್ಲದೆ, ಇನ್ಮುಂದೆ ಗ್ರಾಮದ ವೀಡಿಯೊಗಳನ್ನು ಮಾಡಿದರೆ ಪ್ರಾಣಸಹಿತ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿ, "ನಿನಗೆ ಪತ್ರಕರ್ತಗಿರಿ ಮಾಡುವುದನ್ನು ಕಲಿಸುತ್ತೇವೆ" ಎಂದು ಹೆದರಿಸಿದ್ದಾರೆ.


