ಬಾಗಲಕೋಟೆ: ಕೃಷಿ ಜಮೀನಿಗೆ ಬೃಹತ್ ಗಾತ್ರದ ಮೊಸಳೆಯೊಂದು (crocodile )ದಿಢೀರ್ ನುಗ್ಗಿದ ಪರಿಣಾಮ ತೀವ್ರ ಆತಂಕಗೊಂಡಿದ್ದ ರೈತರಲ್ಲಿ ತಾವೇ ಮೊಸಳೆಯನ್ನು ಸೆರೆಹಿಡಿದಿದ್ದಾರೆ. ಈ ಘಟನೆ ಜಿಲ್ಲೆಯ(Bagalkote) ಹುನಗುಂದ ತಾಲೂಕಿನ ಗಂಜಿಹಾಳ ಗ್ರಾಮದಲ್ಲಿ ನಡೆದಿದೆ.
ಗಂಜಿಹಾಳ ಗ್ರಾಮದ ಸಮೀಪದಲ್ಲೇ ನದಿ ಹಾದು ಹೋಗಿದ್ದು, ನೀರಿನಿಂದ ಹೊರಬಂದ ಈ ಬೃಹತ್ ಮೊಸಳೆ ರೈತರ ಜಮೀನಿನೊಳಗೆ ಪ್ರವೇಶಿಸಿದೆ. ಹೊಲದಲ್ಲಿದ್ದ ರೈತರು ಮೊಸಳೆಯನ್ನು ಕಂಡು ಬೆಚ್ಚಿಬಿದ್ದಿದ್ದು, ಬಳಿಕ ಗ್ರಾಮಸ್ಥರೆಲ್ಲರೂ ಸೇರಿ ತೀವ್ರ ಸಾಹಸ ನಡೆಸಿ ಧೈರ್ಯದಿಂದ ಮೊಸಳೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೊಸಳೆಯನ್ನು ಕಟ್ಟಿಹಾಕಿದ ಬಳಿಕ ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಯಾವುದೇ ನಿಖರ ವಿವರ ನೀಡದೆ ಜಾರಿಕೊಳ್ಳುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ.
ಅಧಿಕಾರಿಗಳ ಈ ಅಜಾಗರೂಕತೆಯಿಂದಾಗಿ ಸ್ಥಳೀಯರು ಹಾಗೂ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ಮೊಸಳೆಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವಂತೆ ಆಗ್ರಹಿಸಿದ್ದಾರೆ.


