ಬೆಂಗಳೂರು : ತಂದೆಯಿಂದ ಹಣ ಪಡೆಯಲು ಮಗನೇ ತನ್ನ ಅಪಹರಣದ ನಾಟಕವಾಡಿ ₹90 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರ ಮನೀಷ್ ಪಟೇಲ್ ಸೇರಿದಂತೆ ಮೂವರನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.
40 ವರ್ಷದ ಮನೀಷ್ ಪಟೇಲ್ ತನ್ನ ತಂದೆಯಿಂದ ಹಣ ಪಡೆಯಲು ಇಬ್ಬರು ಸ್ನೇಹಿತರ ಜೊತೆ ಸೇರಿ ಕಿಡ್ನ್ಯಾಪ್ ನಾಟಕ ರೂಪಿಸಿದ್ದ ಎನ್ನಲಾಗಿದೆ. ಮನೀಷ್‌ನನ್ನು ಅಪಹರಿಸಲಾಗಿದೆ ಎಂದು ಭಾವಿಸಿದ್ದ 62 ವರ್ಷದ ತಂದೆ ಮನೋಹರ್ ಪಟೇಲ್ ಪೊಲೀಸರಿಗೆ ದೂರು ನೀಡಿದ್ದರು.
ಗದಗದಲ್ಲಿ ಹಣದ ವ್ಯವಹಾರವಿದೆ ಎಂದು ತಂದೆಗೆ ಹೇಳಿದ್ದ ಮನೀಷ್, ರೈಲಿನಲ್ಲಿ ಹೋಗುತ್ತಿರುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದ. ಬೆಳಗ್ಗೆ ಫೋನ್ ಮಾಡುವುದಾಗಿ ಹೇಳಿದ್ದ ಎನ್ನಲಾಗಿದೆ.
ಮರುದಿನ ಬೆಳಗ್ಗೆ ಸುಮಾರು 8 ಗಂಟೆಗೆ ಮನೀಷ್‌ನ ಮೊಬೈಲ್ ಸಂಖ್ಯೆಯಿಂದ ತಂದೆಗೆ ವಾಟ್ಸ್‌ಆಯಪ್ ಕರೆ ಬಂದಿದೆ. ಆದರೆ ಕರೆ ಸ್ವೀಕರಿಸಿದಾಗ ಅಪರಿಚಿತ ವ್ಯಕ್ತಿಗಳು ಮಾತನಾಡಿ, ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಿದ್ದೇವೆ ಎಂದು ಹೇಳಿದ್ದಾರೆ.


