ಬೆಂಗಳೂರು : "ನನಗೆ ರಾಜ್ಯದ ಜನರ ಸೇವೆ ಮಾಡಲು ಅನೇಕ ಕನಸುಗಳಿವೆ. ಈ ಕನಸುಗಳನ್ನು ಈಡೇರಿಸಲು ನೀವೆಲ್ಲರೂ ಸಹಕಾರ ನೀಡಿ. ರಾಜಕಾರಣ ಹೊರಗೆ ಮಾಡೋಣ. ಇಲ್ಲಿ ಸೇವೆ ಮಾಡೋಣ. ರಾಜ್ಯದ ಯಶಸ್ಸಿಗೆ ಒಟ್ಟಾಗಿ ನಡೆಯೋಣ. ಜನರು ಕೊಟ್ಟ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳೋಣ" ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಪರಿಷತ್ ನಲ್ಲಿ ಶುಕ್ರವಾರ ಮಾತನಾಡಿದರು. "ಈ ಹಿಂದೆ ಆಡಳಿತ ನಡೆಸಿದ ಅನೇಕರ ಸಾಕ್ಷಿಗುಡ್ಡೆಗಳನ್ನು ಅಳಿಸಲು ಆಗುತ್ತದೆಯೇ? ಎಲ್ಲರೂ ಸೇರಿ ಇತಿಹಾಸ ನಿರ್ಮಾಣ ಮಾಡೋಣ. ಅಧಿಕಾರ ಶಾಶ್ವತವಲ್ಲ. ಇಂದು ಬರುತ್ತದೆ, ನಾಳೆ ಹೋಗುತ್ತದೆ.
ನಾವು ಮಾಡಿದ ಸಾಧನೆ ಮಾತ್ರ ಸಾಕ್ಷಿಗುಡ್ಡೆಯಾಗಿ ಉಳಿಯುತ್ತದೆ. ಜನರು ನಮ್ಮನ್ನು ನೆನಪಿಟ್ಟುಕೊಳ್ಳುವುದು ಅಧಿಕಾರದಿಂದಲ್ಲ, ನಾವು ಮಾಡಿದ ಕೆಲಸದಿಂದ" ಎಂದರು.
"ಬಿಜೆಪಿ, ಕಾಂಗ್ರೆಸ್ ನಲ್ಲಿ ಇದ್ದವರು ಈಗ ಅಂದರ್ ಬಾಹರ್ ಆಗಿದ್ದಾರೆ. ಅಧಿಕಾರ ಹೇಗೆಂದು ಅಳೆಯಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರನ್ನು ಪಕ್ಷೇತರರು ಸೇರಿ ಮುಖ್ಯಮಂತ್ರಿ ಮಾಡಿದರು. ಅಧಿಕಾರದ ಆಟ ಸಾಕಷ್ಟು ನಡೆಯಿತು. ಅಂತಿಮವಾಗಿ ಉಳಿದದ್ದು ಅಧಿಕಾರವಲ್ಲ. ಮನುಷ್ಯತ್ವ. ಮಾಡಿದ ಕೆಲಸ" ಎಂದರು.
ಬಂಗಾರಪ್ಪ ಅವರು ನುಡಿದ ಭವಿಷ್ಯ ನಿಜವಾಗಿದೆ
"ಬಂಗಾರಪ್ಪ ಅವರು ಧರಂಸಿಂಗ್ ಅವರ ಬಳಿಯಿದ್ದ ಬಂಧೀಖಾನೆ ಖಾತೆಯನ್ನು ನನಗೆ ನೀಡಿದರು. ಆಗ ಅವರು ನಾನೂ ಈ ಖಾತೆ ನಿರ್ವಹಿಸಿ ಈಗ ಸಿಎಂ ಆಗಿದ್ದೀನಿ. ನೀನೂ ಒಂದಲ್ಲ ಒಂದು ದಿನ ಸಿಎಂ ಆಗುವೆ ಎಂದಿದ್ದರು.
ಈಗ ಅವರ ಭವಿಷ್ಯ ನಿಜವಾಗಿದೆ ನಾನು ಮಾನವೀಯತೆ ನಂಬುತ್ತೇನೆ. ನನ್ನ ಗುರುಗಳು ನನಗೆ ಇದನ್ನೇ ಹೇಳಿಕೊಟ್ಟಿದ್ದಾರೆ. ಮಾನ ಧರ್ಮಕ್ಕೆ ಜಯವಾಗಲಿ. ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ನಾನು ಒಕ್ಕಲಿಗನಾದರೂ ನಂಬುವುದು ರಂಭಾಪುರಿ ಶ್ರೀಗಳನ್ನು" ಎಂದು ಹೇಳಿದರು.
"ಈ ರಾಜ್ಯದ ಜನರ ಆಶೀರ್ವಾದ, ಪಕ್ಷದ ವರಿಷ್ಠರ ತೀರ್ಮಾನದಿಂದ, ನಮ್ಮ ಪಕ್ಷದ ಶಾಸಕರಿಂದ, ನಾನು ನಂಬಿದ ಗುರುಪೀಠ, ಮಠ, ಸರ್ವಧರ್ಮದ ಗುರುಗಳು ಹಾಗೂ ನನ್ನ ಪರವಾಗಿ ನಿಂತ, ಹರಕೆ ಕಟ್ಟಿದ ಜನರ ಪ್ರಾರ್ಥನೆಯಿಂದ ಸಿಎಂ ಸ್ಥಾನವನ್ನು ಅಲಂಕರಿಸಿದ್ದೇನೆ. ನಾನು ಈಗ ಜನರ ಪ್ರತಿನಿಧಿ. ನಾವೆಲ್ಲರೂ ಸೇರಿ ರಾಜ್ಯದ ಜನರ ಸೇವೆಯನ್ನು ಮಾಡೋಣ" ಎಂದರು.
"ಇಂದು ದುಃಖ ಮತ್ತು ಸಂತೋಷ ಎರಡೂ ಸಂದರ್ಭದಲ್ಲಿ ನಾವು ನಿಂತಿದ್ದೇವೆ. ಬಸರಾಜ ಹೊರಟ್ಟಿ ಅವರು ಬಹಳ ಘನತೆಯಿಂದ ವಿಧಾನಪರಿಷತ್ತನ್ನು ನಡೆಸಿಕೊಟ್ಟು ಮಾದರಿಯಾಗಿದ್ದಾರೆ.
ಅವರು ನಮಗೆಲ್ಲಾ ಕೃತಜ್ಞತೆ ಸಲ್ಲಿಸಬೇಕು ಎಂದು ಆಸೆಪಟ್ಟಿದ್ದರು. ಆದರೆ ಪರಿಸ್ಥಿತಿಯ ನಿರ್ಣಯ ಬೇರೆಯೇ ಇತ್ತು. ಈಗ ಆ ಘಟನೆಯನ್ನು ಮರೆಯೋಣ" ಎಂದರು.
ಇತಿಹಾಸ ನೆನಪಿಸಿಕೊಂಡ ಸಿಎಂ
"ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಾಗ ಬಳಸಿಕೊಳ್ಳಬೇಕು. ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿಸಿದರು. ಆಗ ಇದನ್ನು ಖೈದಿಗಳು ಕಟ್ಟಿದರು. ಒಂದು ದಿನ ಕಟ್ಟಡ ಕಾಮಗಾರಿ ವೀಕ್ಷಣೆಗೆ ಬಂದ ಕೆಂಗಲ್ ಹನುಮಂತಯ್ಯ ಅವರ ಮೇಲೆ ಖೈದಿಗಳು ಸಿಟ್ಟಿನಿಂದ ಚಪ್ಪಲಿ ಎಸೆದಿದ್ದು ಇತಿಹಾಸ. ಇಷ್ಟೆಲ್ಲ ಆಗಿ, ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯ ಅವರಿಗೇ ಇಲ್ಲಿ ಕುಳಿತುಕೊಳ್ಳಲು ಅವಕಾಶ ಸಿಗಲಿಲ್ಲ. ಕೆಂಪೇಗೌಡರು ಬೆಂಗಳೂರು ಕಟ್ಟಿದರು, ಹನುಮಂತಯ್ಯನವರು ವಿಧಾನಸೌಧ ಕಟ್ಟಿದರು, ನೀವು ಅವರಂತೆಯ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಎಂದು ಎಸ್ ಎಂ ಕೃಷ್ಣ ಅವರಲ್ಲಿ ಚರ್ಚೆ ನಡೆಸಿದೆ.
ಅದರ ಫಲವೇ ಈ ವಿಕಾಸಸೌಧ. ವಿಕಾಸಸೌಧದ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಅವರಿಗೆ ಕುರ್ಚಿ ಮೀಸಲಿಡಲಾಗಿತ್ತು. ಆ ಕುರ್ಚಿ ಮೇಲೆ ಲೋಕೋಪಯೋಗಿ ಸಚಿವರಾಗಿದ್ದ ಧರಂಸಿಂಗ್ ಅವರನ್ನು ಕೂರಿಸಿದರು. ಆಗ ನನಗೆ ಭವಿಷ್ಯ ಕಣ್ಣ ಮುಂದೆ ಬಂದಿತು. ನಂತರ ಧರ್ಮಸಿಂಗ್ ಅವರೇ ಮುಖ್ಯಮಂತ್ರಿಯಾದರು" ಎಂದು ಇತಿಹಾಸ ನೆನಪಿಸಿಕೊಂಡರು.


