ನವದೆಹಲಿ: ನ್ಯಾಯಾಲಯಗಳ ಕಲಾಪಗಳಿಗೆ ಸಂಬಂಧಿಸಿದ ವಿಡಿಯೊ ತುಣುಕುಗಳನ್ನು ಸಂದರ್ಭಕ್ಕೆ ತಕ್ಕುದಲ್ಲದ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪ್ರವೃತ್ತಿ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಸೂರ್ಯಕಾಂತ್ ಕಳವಳ ವ್ಯಕ್ತಪಡಿಸಿದ್ದಾರೆ.
'ಪ್ರಕರಣದ ವಿಚಾರಣೆಯೊಂದರ ವೇಳೆ, ತಾವು ಬಳಸಿದ್ದ 'ಕಾಕ್ರೋಚ್' ಪದವನ್ನು ತಪ್ಪಾಗಿ ಅರ್ಥೈಸಲಾಯಿತು. ದೇಶದ ಯುವ ಸಮುದಾಯದ ದಾರಿ ತಪ್ಪಿಸುವ 'ಹಾನಿಕಾರಕ ಉದ್ದೇಶ'ದಿಂದ ಈ ಪದವನ್ನು ಬಳಕೆ ಮಾಡಲಾಯಿತು' ಎಂದು ಸಿಜೆಐ ಹೇಳಿದ್ದಾರೆ.
ಡಿಡಿ ನ್ಯೂಸ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಮಾತು ಹೇಳಿರುವ ಅವರು,'ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಯಿತು. ಆ ನಂತರ ನಡೆದ ಬೆಳವಣಿಗೆಗಳೂ ದುರದೃಷ್ಟಕರ' ಎಂದಿದ್ದಾರೆ.
ನ್ಯಾಯಾಲಯ ಕಲಾಪಗಳ ಕುರಿತು ವರದಿ ಪ್ರಕಟಿಸುವಾಗ ಮಾಧ್ಯಮಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಜೊತೆಗೆ, ಸಮಾಜದಲ್ಲಿ ಸೌಹಾರ್ದ ಕಾಪಾಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೂ ಆಗಿದೆ' ಎಂದು ಹೇಳಿದ್ದಾರೆ.


