ನವದೆಹಲಿ: ದೆಹಲಿಯಲ್ಲಿ (Delhi) ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಸ್ಥಳ ಸಿಗದಿರುವುದು ಹಾಗೂ ಕೊನೆಯ ಕ್ಷಣದಲ್ಲಿ ಸಭಾಂಗಣದ ಬುಕಿಂಗ್ ರದ್ದಾಗಿರುವುದರ ಹಿಂದೆ ಆಡಳಿತಾರೂಢ ಬಿಜೆಪಿ (BJP) ಒತ್ತಡವಿದೆ ಎಂದು ಆರೋಪಿಸಿರುವ ಕಾಕ್‌ರೋಚ್ ಜನತಾ ಪಾರ್ಟಿ (CJP), ಶೀಘ್ರದಲ್ಲೇ 'ಜಂತರ್ ಮಂತರ್ ಸೀಸನ್ 2' ಹೋರಾಟ ನಡೆಸುವುದಾಗಿ ಕರೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅಭಿಜೀತ್ ದಿಪ್ಕೆ (Abhijith Dipke), ಜಂತರ್ ಮಂತರ್‌ನಲ್ಲಿ ನಡೆದಿದ್ದ ಹೋರಾಟದ ಎರಡನೇ ಹಂತ ಯಾವಾಗ ಆರಂಭವಾಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರಶ್ನಿಸುತ್ತಿದ್ದಾರೆ. 'ಜಂತರ್ ಮಂತರ್ ಸೀಸನ್ 2' ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಘೋಷಿಸಿದರು.
ಸಭೆಗಾಗಿ ಹಲವು ಸ್ಥಳಗಳನ್ನು ಸಂಪರ್ಕಿಸಿದ್ದರೂ ಯಾರೂ ಸಭಾಂಗಣ ನೀಡಲು ಮುಂದೆ ಬರಲಿಲ್ಲ. ಎಲ್ಲರೂ ಮೇಲಿನಿಂದ ಒತ್ತಡವಿದೆ ಎಂದು ಹೇಳುತ್ತಿದ್ದರು ಎಂದು ದಿಪ್ಕೆ ಆರೋಪಿಸಿದರು.
ಅಂತಿಮವಾಗಿ ಒಂದು ಸಭಾಂಗಣವನ್ನು ಕಾಯ್ದಿರಿಸಲಾಗಿತ್ತು. ಆದರೆ ಕಾರ್ಯಕ್ರಮದ ದಿನ ಬೆಳಗ್ಗೆಯೇ ಅದರ ಮಾಲೀಕರ ಮೇಲೂ ಒತ್ತಡ ಹೇರಲಾಗಿದೆ ಎಂದು ಅವರು ದೂರಿದರು.
CJP ಸಭೆಗೆ ಅವಕಾಶ ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಭಾಂಗಣದ ಮಾಲೀಕರಿಗೆ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪವನ್ನೂ ದಿಪ್ಕೆ ಮಾಡಿದರು.
ಈ ಎಲ್ಲ ಬೆಳವಣಿಗೆಗಳ ಹಿಂದೆ ಬಿಜೆಪಿ ಇದೆ ಎಂದು ಆರೋಪಿಸಿದ ಅವರು, ಇಂತಹ ಒತ್ತಡಗಳಿಂದ ಪಕ್ಷದ ಕಾರ್ಯಕರ್ತರನ್ನು ಹಿಂಜರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ CJP ಮಾಡಿರುವ ಆರೋಪಗಳಿಗೆ ಬಿಜೆಪಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


