ಬೆಳಗಾವಿ: ಕೋಟ್ಯಂತರ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ 'ಶಿವಂ ಅಸೋಸಿಯೇಟ್ಸ್' ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬಿಗಿ ಕ್ರಮ ಕೈಗೊಂಡಿದ್ದು, ಮುಖ್ಯ ಆರೋಪಿ ಶಿವಾನಂದ ಸಿದ್ದಪ್ಪ ನೀಲಣ್ಣನವರ್‌ನನ್ನು ಮಂಗಳೂರು ವಲಯದ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಸಾರ್ವಜನಿಕರಿಗೆ ಹೆಚ್ಚಿನ ಲಾಭಾಂಶದ ಆಮಿಷ ಒಡ್ಡಿ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ ಆರೋಪ ಈತನ ಮೇಲಿದೆ.
ಬಂಧಿತ ಆರೋಪಿಯನ್ನು ಮಂಗಳೂರಿನ ಇಡಿ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪ್ರಕರಣದ ಆಳವಾದ ತನಿಖೆಯ ಅಗತ್ಯತೆಯನ್ನು ಪರಿಗಣಿಸಿ ನ್ಯಾಯಾಲಯವು ಆರೋಪಿಯನ್ನು 12 ದಿನಗಳ ಕಾಲ ಇಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.
ಈ ಅವಧಿಯಲ್ಲಿ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ (Money Laundering) ಹಾಗೂ ವಂಚಿಸಲಾದ ಹಣದ ಮೂಲ ಮತ್ತು ಹೂಡಿಕೆಯ ಕುರಿತು ತೀವ್ರ ವಿಚಾರಣೆ ನಡೆಸಲಿದ್ದಾರೆ.
ಶಿವಂ ಅಸೋಸಿಯೇಟ್ಸ್ ಸಂಸ್ಥೆಯು ಬೆಳಗಾವಿ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ನೂರಾರು ಜನರಿಂದ ಕೋಟಿಗಟ್ಟಲೆ ರೂಪಾಯಿ ಸಂಗ್ರಹಿಸಿ, ಬಳಿಕ ಹಣ ಹಿಂತಿರುಗಿಸದೆ ವಂಚಿಸಿದೆ ಎನ್ನಲಾದ ಪ್ರಕರಣ ಇದಾಗಿದೆ.
ಈ ಅಕ್ರಮದ ಜಾಲ ಹಾಗೂ ಹಣದ ಅಕ್ರಮ ಲೇವಾದೇವಿ ಕುರಿತು ಇಡಿ ಅಧಿಕಾರಿಗಳು ಹೆಚ್ಚಿನ ತನಿಖೆ ಚುರುಕುಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಹಲವು ಮಹತ್ವದ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.


