ತುರುವೇಕೆರೆ : ರಾಷ್ಟ್ರೀಯ ಹಬ್ಬಗಳು ಸರ್ಕಾರಿ ನೌಕರರಿಗೆ, ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರುವುದು ದುರಂತ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ವಿಷಾಧಿಸಿದರು.ಪಟ್ಟಣದ ಕೆ.ಹಿರಣ್ಣಯ್ಯ ರಂಗಮಂದಿರ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಲೂಕು ಪಂಚಾಯ್ತಿ, ಪಟ್ಟಣ ಪಂಚಾಯ್ತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಡೀ ದೇಶದ ನಾಗರೀಕರು, ಮಹಿಳೆಯರು, ರೈತಾಪಿ ವರ್ಗ, ಎಲ್ಲಾ ಸಮುದಾಯದವರಿಗೆ ಸಿಕ್ಕಿದೆ. ಆದರೆ ಸ್ವಾತಂತ್ರ್ಯ ಸಂಭ್ರಮದಲ್ಲಿ ಯಾರೊಬ್ಬರೂ ಪಾಲ್ಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂಭ್ರಮವನ್ನು ಎಲ್ಲರೂ ಕೂಡಿ ಆಚರಿಸಬೇಕು, ಪ್ರತಿಯೊಬ್ಬರೂ ಆಚರಣೆಯಲ್ಲಿ ಪಾಲ್ಗೊಳ್ಳಬೇಕೆಂದರು.
ವಿಶ್ವದ ಯಾವುದೇ ರಾಷ್ಟ್ರಕ್ಕೂ ಕಡಿಮೆ ಇಲ್ಲದಂತೆ ಭಾರತ ಸಾಧನೆಯಲ್ಲಿ ಅತಿ ವೇಗವಾಗಿ ಮುನ್ನುಗುತ್ತಿದೆ. 1964 ರಲ್ಲಿ ಯುದ್ಧ ನಡೆದಾಗ ನಮ್ಮಲ್ಲಿ ಶಸ್ತ್ರಾಸ್ತ್ರಗಳ ಕೊರತೆಯಿತ್ತು. ಆದರೀಗ ಶಸ್ತ್ರಾಸ್ತ್ರಗಳ ಕೊರತೆಯಿಲ್ಲ. ದೇಶದ ರಕ್ಷಣಾ ವ್ಯವಸ್ಥೆ ಎಷ್ಟು ಬಲಿಷ್ಠವಾಗಿದೆ ಎನ್ನುವುದಕ್ಕೆ ಈ ವರ್ಷ 38,600 ಕೋಟಿ ರೂ ಮೌಲ್ಯದ ಶಸ್ತ್ರಾಸ್ತ್ರವನ್ನು ಬೇರೆ ರಾಷ್ಟ್ರಗಳಿಗೆ ರಫ್ತು ಮಾಡಿದ್ದೇವೆ ಎಂಬುದೇ ಸಾಕ್ಷಿಯಾಗಿದೆ. ದೇಶಕ್ಕೆ ಸೆಮಿ ಕಂಡಕ್ಟರ್ ಅನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಪ್ರಸ್ತುತ ದೊಡ್ಡ ಮಟ್ಟದಲ್ಲಿ ಸೆಮಿ ಕಂಡಕ್ಟರ್ ಅನ್ನು ಬೇರೆ ದೇಶಕ್ಕೆ ರಫ್ತು ಮಾಡುತ್ತಿದ್ದೇವೆ. ವಿಜ್ಞಾನ, ತಂತ್ರಜ್ಞಾನದಲ್ಲಿ ವಿಶ್ವಕ್ಕೆ ಪ್ರಥಮ ಸ್ಥಾನದಲ್ಲಿ ನಾವಿದ್ದೇವೆ ಎಂಬುದು ನಾವೆಲ್ಲರೂ ಹೆಮ್ಮೆ ಪಡುವ ವಿಷಯವಾಗಿದೆ. ದೇಶದ ರಕ್ಷಣಾ ವ್ಯವಸ್ಥೆ, ಮೇಕ್ ಇನ್ ಇಂಡಿಯಾದಲ್ಲೂ ಪ್ರಗತಿಯನ್ನು ಸಾಧಿಸಿ ಸ್ವಾವಲಂಬಿ ದೇಶವಾಗಿ ಬೆಳೆದಿದೆ. ದೇಶವನ್ನಾಳಿದ ಪ್ರಧಾನ ಮಂತ್ರಿಗಳು ದೇಶದ ಅಭಿವೃದ್ದಿಗೆ ತಮ್ಮದೇ ಆದ ಮಹತ್ತರ ಕೊಡುಗೆಯನ್ನು ನೀಡಿದ್ದು, ಅವರೆಲ್ಲರನ್ನು ನಾವು ಸ್ಮರಿಸಬೇಕಿದೆ ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಕುಂಇ ಅಹಮದ್, ಗಾಂಧೀಜಿಯವರ ಸತ್ಯಾಗ್ರಹ, ಸುಭಾಷ್ ಚಂದ್ರ ಬೋಸ್ ಅವರ ಸೇನಾ ಹೋರಾಟ, ಭಗತ್ ಸಿಂಗ್, ರಾಜ್ ಗುರು, ಸುಖದೇವ್, ಚಂದ್ರಶೇಖರ ಆಜಾದ್ ಅವರ ಬಲಿದಾನ, ಡಾ.ಅಂಬೇಡ್ಕರ್ ಅವರ ಸಂವಿಧಾನ, ದೇಶದವನ್ನು ಒಗ್ಗೂಡಿಸಲು ಶ್ರಮಿಸಿದ ಸರ್ದಾರ್ ವಲ್ಲಭಾಯಿ ಪಟೇಲ್, ಜವಹರ್ ಲಾಲ್ ನೆಹರು, ಕರ್ನಾಟಕ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ ಸೇರಿದಂತೆ ಲಕ್ಷಾಂತರ ಮಂದಿಯ ತ್ಯಾಗ ಬಲಿದಾನದ ಫಲವಾಗಿ ಸ್ವಾತಂತ್ರ್ಯ ಸಿಕ್ಕಿದೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರವನ್ನು ಒದಗಿಸುವುದೇ ಸ್ವಾತಂತ್ರ್ಯೋವದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಪಾರದರ್ಶಕವಾಗಿ ಸರ್ಕಾರದ ಸವಲತ್ತುಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪತ್ರಕರ್ತ ಗಿರೀಶ್ ಕೆ ಭಟ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧಕ ಮಾಚೇನಹಳ್ಳಿ ಚಾರ್ವಿಕ್, ರಂಗಭೂಮಿ ಕಲಾವಿದರಾದ ಗಂಗಾಧರ್, ಬಿ.ಆರ್. ಕೃಷ್ಣಸ್ವಾಮಿ, ಅಗ್ನಿಶಾಮಕ ದಳದ ಧರಣೇಶ್, ಕಂದಾಯ ಇಲಾಖೆಯ ಮಂಜುನಾಥ್, ಸ್ವಯಂಸೇವಕ ಭದ್ರಸ್ವಾಮಿ, ಸಾಹಿತಿ ಪ್ರೇಮ್ ಕುಮಾರ್, ವಿದ್ಯಾರ್ಥೀ ಸುಹಾಸ್, ಹ್ಯಾಂಡ್ ಬಾಲ್ ಚಿನ್ನದ ಪದಕ ವಿಜೇತರಾದ ಉದಯ್ ಕುಮಾರ್, ನಿಶ್ಚಯ್ ಗೌಡ, ಮೋನಿತ್ ಗೌಡ, ಶ್ರೇಯಸ್ ಗೌಡ, ಯೋಗಾನಂದ್, ಉಮಾಶಂಕರ್, ರೈತಸಂಘದ ಕಣಕೂರು ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. 
ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಯಶೋಧ ಮುಖ್ಯ ಭಾಷಣ ಮಾಡಿದರು. ಕಸಾಪ ಅಧ್ಯಕ್ಷ ಡಿ.ಪಿ.ರಾಜು, ನೌಕರರ ಸಂಘದ ಅಧ್ಯಕ್ಷ ಪಾಪಣ್ಣ, ಒಕ್ಕಲಿಗರ ಸಂಘದ ಅಧ್ಯಕ್ಷ ತ್ಯಾಗರಾಜ್, ಲಯನ್ಸ್ ಕ್ಲಬ್ ಅಧ್ಯಕ್ಷ ಸುನಿಲ್ ಬಾಬು, ಇನ್ನರ್ ವೀಲ್ ಅಧ್ಯಕ್ಷೆ ಡಾ.ಆಶಾ ಚೌದ್ರಿ, ಬಿಇಒ ಸೋಮಶೇಖರ್, ಇಒ ಅನಂತರಾಜು, ಮುಖ್ಯಾಧಿಕಾರಿ ಶ್ರೀನಾಥ್ ಬಾಬು ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್


