ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದ ಸಂವಿಧಾನಕ್ಕೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಮಂಡಲದ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸತ್ತಿನ ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ರಾಹುಲ್ ಗಾಂಧಿ ಕಳಂಕ ತರುತ್ತಿದ್ದಾರೆ.
ಎಲ್ಲವೂ ತಿಳಿದಿದ್ದರೂ ಅವರು ಈ ರೀತಿ ಮಾಡುತ್ತಿದ್ದು, ಈ ಬಗ್ಗೆ ದೇಶದ ಜನರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್) ಒಂದು 'ಬ್ಲಾಕ್ ಬಾಕ್ಸ್' ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಕಡಾಖಂಡಿತವಾಗಿ ತಿರುಗೇಟು ನೀಡಿದ ಆರ್. ಅಶೋಕ್, "ಇವಿಎಂ ತಂದಿದ್ದೇ ನಿಮ್ಮಪ್ಪ. ನಿಮಗೇನು ನಿಮ್ಮಪ್ಪನ ಹೆಸರೇ ಮರೆತು ಹೋಗಿದೆಯಾ? ನಿಮ್ಮ ತಂದೆಯ ಮೇಲೆಯೇ ನಿಮಗೆ ನಂಬಿಕೆ ಇಲ್ವಾ?" ಎಂದು ಪ್ರಶ್ನಿಸಿದರು.
ಅಲ್ಲದೆ, "ಧೈರ್ಯವಿದ್ದರೆ ಕಾಂಗ್ರೆಸ್ ನಾಯಕರು ಚುನಾವಣೆಯನ್ನು ಬಹಿಷ್ಕರಿಸಿ ಮತ್ತೆ ಚುನಾವಣೆ ಎದುರಿಸಲಿ" ಎಂದು ಸವಾಲು ಹಾಕಿದರು. ಕರ್ನಾಟಕ, ತೆಲಂಗಾಣ ಹಾಗೂ ಕೇರಳದಲ್ಲಿ ಕಾಂಗ್ರೆಸ್ ಹೇಗೆ ಗೆದ್ದಿತು ಎಂಬುದಕ್ಕೆ ಮೊದಲು ಉತ್ತರ ನೀಡಲಿ; ಗೆದ್ದಾಗ ಚುನಾವಣಾ ಆಯೋಗ ದೇವರು, ಸೋತಾಗ ವಿಲನ್ ಆಗುತ್ತದೆಯೇ ಎಂದು ಚಾಟಿ ಬೀಸಿದರು.


