ಬೆಂಗಳೂರು: ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡದಿದ್ದಲ್ಲಿ ಮುಂದಿನ 2028ರ ವಿಧಾನಸಭೆ ಚುನಾವಣೆಯಲ್ಲಿ ಮುಲಾಜಿಲ್ಲದೆ ಟಿಕೆಟ್ ಕೈತಪ್ಪಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಶಾಸಕರಿಗೆ ನೇರ ಹಾಗೂ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, ಶಾಸಕರ ಅನುದಾನ ಸೇರಿದಂತೆ ಹಲವು ಬೇಡಿಕೆಗಳನ್ನು ಆಲಿಸುವ ಜೊತೆಯಲ್ಲೇ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಶಾಸಕರ ಹೆಗಲಿಗೆ ಏರಿಸಿದ್ದಾರೆ.
ಸುಲಭವಾಗಿ ಟಿಕೆಟ್ ಸಿಗಲಿದೆ ಎಂದು ಯೋಚಿಸಬೇಡಿ: ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸುವಂತೆ ಸೂಚಿಸಿದ ಅವರು, "ಮುಂದಿನ ದಿನಗಳಲ್ಲಿ ಒಂದರ ಮೇಲೊಂದರಂತೆ ವಿವಿಧ ಚುನಾವಣೆಗಳು ಎದುರಾಗಲಿವೆ. ಶಾಸಕರಾಗಿ ಕ್ಷೇತ್ರದಲ್ಲಿದ್ದ ತಕ್ಷಣ ಸುಲಭವಾಗಿ ಮತ್ತೆ ಟಿಕೆಟ್ ಸಿಗುತ್ತದೆ ಎಂದು ಯಾರೂ ಯೋಚಿಸಬಾರದು.
ಕ್ಷೇತ್ರದಲ್ಲಿ ಎಷ್ಟೇ ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ಸಹ ಅದರ ಜೊತೆಗೆ ಪಕ್ಷವನ್ನು ಸಂಘಟಿಸುವುದು ಕಡ್ಡಾಯ. ಪಕ್ಷ ಕಟ್ಟಿದರೆ ಮಾತ್ರವೇ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗಲು ಅನುಕೂಲವಾಗಲಿದೆ" ಎಂದು ಸ್ಪಷ್ಟಪಡಿಸಿದರು.


