ಚನ್ನಗಿರಿ: ಆನ್‌ಲೈನ್ ಗೇಮ್‌ನ ಗೀಳು ಅಂಟಿಸಿಕೊಂಡ ತಾಲ್ಲೂಕಿನ ಪಾಂಡೊಮಟ್ಟಿ ಗ್ರಾಮದ ಟಿ.ಆರ್. ಮನೋಜ್ (13), ಉಚಿತ ಖಾತೆ (ಐಡಿ) ಹೊಂದುವ ಆಸೆಗೆ ಬಿದ್ದು ₹ 4.11 ಲಕ್ಷ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಾಲಕನಿಂದ ಹಣ ವಸೂಲಿ ಮಾಡಿ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಇದೇ ಗ್ರಾಮದ ಬೊಮ್ಮಲಿಂಗ, ಮನು, ಸಂಜಯ್, ಯಶವಂತ್ ಹಾಗೂ ಮಣಿ ಎಂಬುವರನ್ನು ಚನ್ನಗಿರಿ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗ್ರಾಮದ ಖಾಸಗಿ ಶಾಲೆಯಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಟಿ.ಆರ್. ಮನೋಜ್ (13), 'ಫ್ರೀ ಫೈರ್' ಆನ್‌ಲೈನ್ ಗೇಮ್ ಗೀಳು ಅಂಟಿಸಿಕೊಂಡಿದ್ದ. ಗೇಮ್‌ನ 105ನೇ ಹಂತದ ಆಟದ ಖಾತೆಯನ್ನು ಉಚಿತವಾಗಿ ನೀಡುವುದಾಗಿ ಐವರು ಯುವಕರು ಆಸೆ ತೋರಿಸಿದ್ದರು. ಇದಕ್ಕೆ ಆರಂಭದಲ್ಲಿ ₹ 6,000 ಹಣವನ್ನು ಪಡೆದಿದ್ದರು' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲಕನ ತಿಜೋರಿಯ ಮೇಲೆ ಕಣ್ಣು ಹಾಕಿದ ಆರೋಪಿಗಳು ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ತಿಜೋರಿಯ ಒಂದು ಕೀಲಿಯನ್ನು ಪೋಷಕರಿಗೆ ಗೊತ್ತಿಲ್ಲದಂತೆ ತನ್ನ ಬಳಿ ಇಟ್ಟುಕೊಂಡಿದ್ದ ಮನೋಜ್, ಹಂತ-ಹಂತವಾಗಿ ₹4 ಲಕ್ಷ ಹಾಗೂ ಪಾಲಕರ ಮೊಬೈಲ್‌ನ ಯುಪಿಐ ಮೂಲಕ ₹ 11,000 ಪಾವತಿಸಿದ್ದಾನೆ. ಇನ್ನೂ ಹೆಚ್ಚಿನ ಹಣ ಕೊಡಲು ನಿರಾಕರಿಸಿದ ಬಾಲಕಿಗೆ ಆರೋಪಿಗಳು ಕೊಲೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಮನೆಯ ತಿಜೋರಿಯಿಂದ ಮಗ ಹಣ ಕದ್ದಿರುವ ವಿಚಾರ ಅ.6ರಂದು ಪಾಲಕರಿಗೆ ಗೊತ್ತಾಗಿದೆ. ಬಾಲಕನನ್ನು ವಿಚಾರಣೆ ಮಾಡಿದಾಗ ಬ್ಲ್ಯಾಕ್‌ಮೇಲ್ ತಂತ್ರ ಬೆಳಕಿಗೆ ಬಂದಿದೆ. ಪುತ್ರನಿಗೆ ಬುದ್ಧಿವಾದ ತಂದೆ ರೇವಣ್ಣ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದರು.
ಅ.7ರಂದು ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


