ಬೆಂಗಳೂರು: ರಾಜ್ಯ ವಿಧಾನಪರಿಷತ್‌ನ ತೆರವಾಗಿರುವ ಏಳು ಸದಸ್ಯ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದ್ದು, ಅಂತಿಮ ಹಂತದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸಮಿತಿ ಸಭೆ ಕೊಠಡಿಯಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಶಾಸಕರು ಮತದಾನ ಮಾಡಲಿದ್ದಾರೆ.
ಸುಗಮ ಮತ್ತು ಗೌಪ್ಯ ಮತದಾನಕ್ಕಾಗಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮತಗಟ್ಟೆಯ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಸಂಖ್ಯಾಬಲದ ಲೆಕ್ಕಾಚಾರ ಹೀಗಿದೆ:
ವಿಧಾನಸಭೆಯ ಒಟ್ಟು ಶಾಸಕರ ಬಲಾಬಲ 222 ಆಗಿದ್ದು, ಒಬ್ಬ ಅಭ್ಯರ್ಥಿಯ ಗೆಲುವಿಗೆ 28 ಮತಗಳ ಅಗತ್ಯವಿದೆ.
ಕಾಂಗ್ರೆಸ್ (135 ಶಾಸಕರು): ಕಣಕ್ಕಿಳಿದಿರುವ ಐವರು ಅಭ್ಯರ್ಥಿಗಳ ಗೆಲುವಿಗೆ ಒಟ್ಟು 140 ಮತಗಳು ಬೇಕಾಗುತ್ತವೆ.
ಕಾಂಗ್ರೆಸ್ ಬಳಿ ಸದ್ಯ 135 ಮತಗಳಿದ್ದು, 5 ಮತಗಳ ಕೊರತೆಯಿದೆ. ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್, ಇಬ್ಬರು ಪಕ್ಷೇತರರು ಹಾಗೂ ಸರ್ವೋದಯ ಪಕ್ಷದ ಶಾಸಕರು ಬೆಂಬಲಿಸಿದರೆ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಸುಲಭವಾಗಲಿದೆ.


