ಮೈಸೂರು : ಅರಮನೆ ಸಮೀಪದ ದೊಡ್ಡ ಗಡಿಯಾರ ವೃತ್ತದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 17 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವೈಷ್ಣವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಂದೆ ವೆಂಕಟೇಶ್ ನಾಯಕ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಂದೆಯೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳು ಮತ್ತು ಸ್ಥಳೀಯರ ಪ್ರಕಾರ, ಅಪಘಾತ ಸಂಭವಿಸಿದ ಸ್ಥಳದಲ್ಲಿ ಏಕಕಾಲದಲ್ಲಿ 10-15 ಜೋಡಿಗಳ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಳು ನಡೆಯುತ್ತಿದ್ದವು. ಇದು ವಾಹನ ಸವಾರರ, ನಿರ್ದಿಷ್ಟವಾಗಿ ಬಸ್ ಚಾಲಕನ ಗಮನವನ್ನು ಬೇರೆಡೆ ಸೆಳೆದು ಅಪಘಾತಕ್ಕೆ ಕಾರಣವಾಯಿತು ಎಂದು ಆರೋಪಿಸಲಾಗಿದೆ.
ಮೈಸೂರಿನ ಪ್ರವಾಸಿ ತಾಣಗಳಲ್ಲಿ ಅಸಮರ್ಪಕವಾಗಿ ನಡೆಯುವ ಈ ರೀತಿಯ ಫೋಟೋಶೂಟ್‌ಗಳು ರಸ್ತೆ ಸುರಕ್ಷತೆಗೆ ಮಾರಕವಾಗಿದ್ದು, ಈ ಬಗ್ಗೆ ಸಾಕಷ್ಟು ದೂರುಗಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಅನಾಹುತಗಳು ಸಂಭವಿಸದಂತೆ ತಡೆಯಲು ಪೊಲೀಸ್ ಇಲಾಖೆ ತಕ್ಷಣ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯ ಕೇಳಿಬಂದಿದೆ.


