ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ಕೆಪಿಎಸ್‌ಸಿಯನ್ನೇ ಮುಚ್ಚುವ (ರದ್ದುಗೊಳಿಸುವ) ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸೌಧದಲ್ಲಿ ತಿಳಿಸಿದ್ದಾರೆ.
ಸಂಸ್ಥೆಯ ಮೇಲೆ ಅಪಾರ ನಂಬಿಕೆ ಇಟ್ಟು ನೇಮಕಾತಿ ಜವಾಬ್ದಾರಿ ವಹಿಸಲಾಗುತ್ತಿತ್ತು, ಆದರೆ ಪದೇ ಪದೇ ಇಂತಹ ಅಕ್ರಮಗಳು ಮರುಕಳಿಸುತ್ತಿರುವುದು ಲಕ್ಷಾಂತರ ಅಭ್ಯರ್ಥಿಗಳ ಹಾಗೂ ಮಕ್ಕಳ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕೆಪಿಎಸ್‌ಸಿಯನ್ನು ಕಾನೂನಾತ್ಮಕವಾಗಿ ಮುಚ್ಚುವ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಸರಕಾರ ಕಾನೂನು ತಜ್ಞರೊಂದಿಗೆ ಆಲೋಚನೆ ನಡೆಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸರಣಿ ಅಕ್ರಮಗಳಿಂದಾಗಿ ಸಂಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆ ಕುಸಿದಿದ್ದು, ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸರಕಾರ ಈ ಕಠಿಣ ಹೆಜ್ಜೆಯಿಡಲು ಮುಂದಾಗಿದೆ ಎಂದು ತಿಳಿಸಲಾಗಿದೆ.


