ಬೆಂಗಳೂರು: ರಾಜಕೀಯದಲ್ಲಿ ಅಧಿಕಾರ ಮತ್ತು ಸ್ಥಾನಮಾನಗಳು ಎಷ್ಟು ಬೇಗ ಬದಲಾಗುತ್ತವೆ ಹಾಗೂ ಇಲ್ಲಿ ಯಾವುದೂ ಶಾಶ್ವತವಲ್ಲ ಎಂಬುದಕ್ಕೆ ಇಂದು ವಿಧಾನಸೌಧದ ಮೊಗಸಾಲೆ (Corridor) ಸಾಕ್ಷಿಯಾಗಿದೆ.
ಕೇವಲ ಕೆಲವು ದಿನಗಳ ಹಿಂದೆಯಷ್ಟೇ ಹತ್ತಾರು ಸಚಿವರು, ಶಾಸಕರು ಹಾಗೂ ಬೆಂಬಲಿಗರ ಪಡೆಯೊಂದಿಗೆ ಗತ್ತಿನಿಂದ ಹೆಜ್ಜೆ ಹಾಕುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಒಂಟಿಯಾಗಿ ಓಡಾಡುತ್ತಿರುವ ದೃಶ್ಯವೊಂದು ಇಡೀ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿದೆ.
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧಕ್ಕೆ ಭೇಟಿ ನೀಡಿದ್ದರು.
ಆದರೆ, ಅಧಿಕಾರ ಹೋಗುತ್ತಿದ್ದಂತೆ ರಾಜಕೀಯದ ಚಿತ್ರಣ ಸಂಪೂರ್ಣ ಬದಲಾಗಿದ್ದು, ಅವರ ಹಿಂದೆ ಮುಂಚಿನಂತೆ ಯಾವುದೇ ಶಾಸಕರಾಗಲಿ ಅಥವಾ ಬೆಂಬಲಿಗರ ದಂಡಾಗಲಿ ಇರಲಿಲ್ಲ. ಸಿದ್ದರಾಮಯ್ಯ ಅವರು ವಿಧಾನಸೌಧದ ಆವರಣದಲ್ಲಿ ಏಕಾಂಗಿಯಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.
ಯಾರೋ ಅಪರಿಚಿತರಂತೆ ಸಾಗಿದ ನಾಯಕರು
ಇದೇ ವೇಳೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿರುವ ಮತ್ತೊಂದು ಪ್ರಮುಖ ಘಟನೆ ನಡೆದಿದೆ.
ವಿಧಾನಸೌಧದ ಆವರಣದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅನಿರೀಕ್ಷಿತವಾಗಿ ಮುಖಾಮುಖಿಯಾಗಿದ್ದಾರೆ.
ಆದರೆ, ಇಬ್ಬರೂ ಘಟಾನುಘಟಿ ನಾಯಕರು ಪರಸ್ಪರ ಎದುರಾದರೂ ಒಬ್ಬರಿಗೊಬ್ಬರು ಮಾತನಾಡಿಸಿಲ್ಲ ಕನಿಷ್ಠ ಸೌಜನ್ಯದ ನಗು ಅಥವಾ ಹಸ್ತಲಾಘವವನ್ನೂ ಮಾಡದೆ, ಯಾರೋ ಅಪರಿಚಿತರಂತೆ ಇಬ್ಬರೂ ತಮ್ಮ ಪಾಡಿಗೆ ತಾವು ಮುಂದೆ ಸಾಗಿ ಹೋಗಿದ್ದಾರೆ. ಇಬ್ಬರು ನಾಯಕರ ನಡುವಿನ ಈ ಮೌನ ಮತ್ತು ಶೀತಲ ಸಮರವು ಸದ್ಯ ವಿಧಾನಸೌಧದ ಅಂಗಳದಲ್ಲಿ ಭಾರಿ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.
ಮನಸ್ಸಿನಲ್ಲಿ ಇಷ್ಟೊಂದು ದ್ವೇಷವನ್ನು ಇಟ್ಟುಕೊಂಡು, ಇಷ್ಟು ದಿನಗಳ ಕಾಲ ಇವರಿಬ್ಬರು ಹೇಗೆ ನಾಟಕವಾಡುತ್ತಿದ್ದರು ಎಂಬುದನ್ನು ಕರ್ನಾಟಕ ಕಾಂಗ್ರೆಸ್ ರಾಜ್ಯದ ಜನತೆಗೆ ತಿಳಿಸಬೇಕು” ಎಂದು ಬಿಜೆಪಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.

