ವಿಜಯಪುರ: ಆಸ್ತಿ ಹಂಚಿಕೆ ಹಾಗೂ ವಿವಾಹೇತರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಹೆತ್ತ ತಂದೆಯನ್ನೇ ಮಗಳು ತನ್ನ ಪ್ರಿಯಕರ ಮತ್ತು ಆತನ ಸ್ನೇಹಿತನ ಜತೆಗೂಡಿ ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಇಂಡಿ ತಾಲೂಕಿನ ಚೌಡಿಹಾಳ್ ರಸ್ತೆಯ ಪೂಜಾರಿ ವಸ್ತಿ ತೋಟದ ಬಳಿ ನಡೆದಿದೆ.
ನಿವೃತ್ತ ಶಿಕ್ಷಕ ಸಿದ್ದಪ್ಪ ಅಂಜುಟಗಿ (62) ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪುತ್ರಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಸಂತೋಷ್‌ನನ್ನು ಪೊಲೀಸರು ಬಂಧಿಸಿದ್ದು, ಕೃತ್ಯದಲ್ಲಿ ಭಾಗಿಯಾದ ಮತ್ತೊಬ್ಬ ಆರೋಪಿ ಗುರುರಾಜ್ ಬಿರಾದಾರ್‌ಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಸಿದ್ದಪ್ಪ ಅವರು ಎರಡು ವರ್ಷಗಳ ಹಿಂದೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದು, ಅವರಿಗೆ ಬಂದಿದ್ದ ನಿವೃತ್ತಿ ವೇತನದ ಹಣ ಹಾಗೂ ಊರಲ್ಲಿದ್ದ ಜಮೀನಿನ ವಿಚಾರವಾಗಿ ತಂದೆ-ಮಗಳ ನಡುವೆ ನಿರಂತರ ಮನಸ್ತಾಪವಿತ್ತು.
ಕೋವಿಡ್ ಸಮಯದಲ್ಲಿ ಪತಿಯನ್ನು ಕಳೆದುಕೊಂಡಿದ್ದ ಪ್ರಿಯಾಂಕಾಗೆ ವಿಜಯಪುರದಲ್ಲಿ ಆಟೋ ಚಾಲಕ ಸಂತೋಷ್ ಶಿಂಧೆ ಜತೆ ಅನೈತಿಕ ಸಂಬಂಧ ಬೆಳೆದಿತ್ತು. ಈ ನಡವಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ಸಿದ್ದಪ್ಪ, ಆಕೆಗೆ ಆಸ್ತಿಯಲ್ಲಿ ಯಾವುದೇ ಪಾಲು ನೀಡುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿದ್ದರು.


