ಬೆಂಗಳೂರು: ರಾಜ್ಯ ವಿಧಾನಮಂಡಲದ ವಿಶೇಷ ಕಲಾಪ ನಡೆಯುತ್ತಿರುವ ಬೆನ್ನಲ್ಲೇ, ವಿಧಾನಪರಿಷತ್ ಕಾರ್ಯಕಲಾಪಗಳನ್ನು ಹೆಚ್ಚುವರಿಯಾಗಿ ಮತ್ತೊಂದು ದಿನ ಅಂದರೆ ನಾಳೆಗೂ (ಗುರುವಾರ) ಮುಂದುವರಿಸಲು ನಿರ್ಧರಿಸಲಾಗಿದೆ.
ಈ ಕುರಿತು ವಿಧಾನಪರಿಷತ್ ಸಭಾನಾಯಕರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸದನದಲ್ಲಿ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದ್ದಾರೆ.
ಮಹತ್ವದ ವಿಷಯಗಳ ವಿಸ್ತೃತ ಚರ್ಚೆಗೆ ನಿರ್ಧಾರ:
ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಹಾಗೂ ಕಸ್ತೂರಿರಂಗನ್ ವರದಿ ಜಾರಿ ಕುರಿತಾದ ಚರ್ಚೆ ಸೇರಿದಂತೆ ಸಾರ್ವಜನಿಕ ರಂಗದ ಪ್ರಮುಖ ವಿಷಯಗಳು ಕಲಾಪದ ಅಜೆಂಡಾದಲ್ಲಿವೆ. ಪರಿಷತ್‌ನಲ್ಲಿ ವಿಷಯಾಧಾರಿತ ಸುದೀರ್ಘ ಚರ್ಚೆ ಹಾಗೂ ಎಲ್ಲಾ ಪಕ್ಷಗಳ ಶಾಸಕರ ಅಭಿಪ್ರಾಯಗಳನ್ನು ವಿವರವಾಗಿ ಕ್ರೂಢೀಕರಿಸುವ ಉದ್ದೇಶದಿಂದ ಕಲಾಪವನ್ನು ಒಂದು ದಿನ ಹೆಚ್ಚುವರಿಯಾಗಿ ವಿಸ್ತರಿಸಲಾಗಿದೆ.
ಈ ಮುಂಚೆ ಯೋಜಿಸಲಾಗಿದ್ದ ಮೂರು ದಿನಗಳ ಕಲಾಪದ ಅವಧಿ ಮುಕ್ತಾಯಗೊಳ್ಳುತ್ತಿರುವುದರಿಂದ, ಬಾಕಿ ಇರುವ ವಿಷಯಗಳ ಕುರಿತು ಪೂರ್ಣಪ್ರಮಾಣದ ಚರ್ಚೆ ನಡೆಸಲು ಅನುಕೂಲವಾಗುವಂತೆ ಆಡಳಿತ ಮತ್ತು ವಿಪಕ್ಷಗಳ ಸಮ್ಮತಿಯೊಂದಿಗೆ ಸದನದ ನಾಯಕರು ಈ ತೀರ್ಮಾನವನ್ನು ಕೈಗೊಂಡಿದ್ದಾರೆ.


