ವಿಜಯಪುರ : ಎಸ್‌ಐಆರ್ (SIR) ಪ್ರಕ್ರಿಯೆ ಸಂಬಂಧ ನಡೆಯುತ್ತಿರುವ ವಿವಾದದ ನಡುವೆಯೇ ಮತದಾರರ ಪಟ್ಟಿಗೆ ಸಂಬಂಧಿಸಿದ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
ಫಾರ್ಮ್-7 (Form 7) ದುರ್ಬಳಕೆ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಗ್ವಾದ ಮುಂದುವರಿದಿರುವಾಗಲೇ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basava Gouda Patil Yatnal) ಅವರು ಸೆಪ್ಟೆಂಬರ್ 30ರಂದು ಎಂಟು ಮತದಾರರು ಮೃತಪಟ್ಟಿದ್ದಾರೆ ಎಂದು ಹೇಳಿ ಅವರ ಮರಣ ಪ್ರಮಾಣ ಪತ್ರಗಳನ್ನು ಪ್ರದರ್ಶಿಸಿದ್ದರು.
ಆದರೆ ಯತ್ನಾಳ್ ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದ ಎಂಟು ಮಂದಿಯೇ ಇದೀಗ ಜಿಲ್ಲಾಧಿಕಾರಿ ಎದುರು ಹಾಜರಾಗಿ ತಾವು ಸಂಪೂರ್ಣವಾಗಿ ಜೀವಂತವಾಗಿರುವುದಾಗಿ ತಿಳಿಸಿದ್ದಾರೆ.
ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಈ ರೀತಿಯ ಪ್ರಯತ್ನ ನಡೆದಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ ಹೆಸರಿನ ಮರಣ ಪ್ರಮಾಣ ಪತ್ರಗಳು ಶಾಸಕ ಯತ್ನಾಳ್ ಅವರ ಕೈಗೆ ಹೇಗೆ ಬಂದವು ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ.
ಪಾಲಿಕೆಯಿಂದ ನೀಡಲಾಗಿದೆ ಎನ್ನಲಾದ ಈ ಮರಣ ಪ್ರಮಾಣ ಪತ್ರಗಳು ನಿಜವಾದವೆಯೇ ಅಥವಾ ನಕಲಿ ದಾಖಲೆಗಳೇ ಎಂಬುದನ್ನು ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.
ಜೀವಂತ ವ್ಯಕ್ತಿಗಳ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಲು ಕಾರಣರಾದವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿಯ ಪಾತ್ರದ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ.


