ಹಾಸನ : ಪತ್ನಿಯ ವಿವಾಹೇತರ ಸಂಬಂಧ ಹಾಗೂಕೌಟುಂಬಿಕ ಕಲಹದಿಂದ ನೊಂದ ವಿವಾಹಿತ ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿಟ್ಟು, ವಿಷ ಸೇವಿಸಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ತಾಲೂಕಿನ ಹಿರಿಸಾವೆ ಹೋಬಳಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ತಾಲೂಕಿನ ಬೆಳಗಿಹಳ್ಳಿ ಗ್ರಾಮದ ನಿವಾಸಿ ದೊರೆ (27) ಮೃತಪಟ್ಟ ದುರ್ದೈವಿ. ಈತ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಮೂಲದ ಯುವತಿಯನ್ನು ಪ್ರೀತಿಸಿ ಹಸೆಮಣೆ ಏರಿದ್ದನು.
ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಾಂಪತ್ಯದಲ್ಲಿ ಇತ್ತೀಚೆಗೆ ಬಿರುಕು ಮೂಡಿತ್ತು ಎನ್ನಲಾಗಿದ್ದು, ಕಳೆದ ಹದಿನೈದು ದಿನಗಳ ಹಿಂದಷ್ಟೇ ಪತ್ನಿ ಗಂಡನ ಮನೆ ತೊರೆದು ತನ್ನ ತವರು ಮನೆಗೆ ತೆರಳಿದ್ದರು.
ಆತ್ಮಹತ್ಯೆಗೆ ಶರಣಾಗುವ ಮುನ್ನ ದೊರೆ ತನ್ನ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಅದರಲ್ಲಿ ತನ್ನ ಸಾವಿಗೆ ಪತ್ನಿ ಹಾಗೂ ಆಕೆಯ ಕುಟುಂಬಸ್ಥರೇ ಕಾರಣವೆಂದು ನೇರವಾಗಿ ಆರೋಪಿಸಿದ್ದಾನೆ.
"ನಾನು ಆಕೆಯನ್ನು ಅಪಾರ ಪ್ರೀತಿಯಿಂದ ನೋಡಿಕೊಂಡಿದ್ದೆ. ಆದರೆ ಆಕೆ ಪರಪುರುಷನ ಜೊತೆ ಅಕ್ರಮ ಸಂಪರ್ಕ ಬೆಳೆಸಿ ನನಗೆ ನಂಬಿಕೆದ್ರೋಹ ಎಸಗಿದ್ದಾಳೆ.
ಈ ಅನ್ಯಾಯದ ಬಗ್ಗೆ ಆಕೆಯ ತಂದೆ-ತಾಯಿಗೆ ತಿಳಿಸಿದರೂ, ಅವರು ಮಗಳ ತಪ್ಪನ್ನು ತಿದ್ದುವ ಬದಲು ಆಕೆಯ ಪರವಾಗಿಯೇ ನಿಂತು ಬೆಂಬಲ ನೀಡಿದರು. ಅಷ್ಟೇ ಅಲ್ಲದೆ ನನ್ನ ಮೇಲೆ ವಾಮಾಚಾರ (ಮಾಟ-ಮಂತ್ರ) ಮಾಡಿಸಿದ್ದಾರೆ" ಎಂದು ಕಣ್ಣೀರಿಡುತ್ತಾ ಅಳಲು ತೋಡಿಕೊಂಡಿದ್ದಾನೆ.


