ತುರುವೇಕೆರೆ : ಸದೃಢ ದೇಶ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು, ದೇಶದ ಹಿತದೃಷ್ಟಿಯಿಂದ ಯುವ ಸಮೂಹ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸಬೇಕೆಂದು ಬಿಜೆಪಿ ನಗರ ಯುವ ಘಟಕದ ಅಧ್ಯಕ್ಷ ರಾಘವೇಂದ್ರ ಟಿ.ಜಿ. ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ 12 ವರ್ಷದಿಂದ ಭಾರತವು ವಿಶ್ವ ಭೂಪಟದಲ್ಲಿ ರಾರಾಜಿಸುತ್ತಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಆರ್ಥಿಕವಾಗಿ ದಿವಾಳಿಯಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿರುವಾದ ಭಾರತವು ವಿಶ್ವಗುರುವಾಗುವತ್ತ ದಾಪುಗಾಲಿಟ್ಟಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ಆಡಳಿತವೇ ಕಾರಣವಾಗಿದೆ. ನರೇಂದ್ರ ಮೋದಿಯವರ ಆಡಳಿತವನ್ನು ವಿಶ್ವವೇ ಮೆಚ್ಚಿದೆ. ಅಲ್ಲದೆ ದೇಶದಲ್ಲಿ ಭ್ರಷ್ಟಾಚಾರ ಮುಕ್ತ, ಅಭಿವೃದ್ದಿ ಪರವಾದ ಸರ್ಕಾರ ಬೇಕೆಂಬುದು ದೇಶದ ಜನರ ನಿಲುವಾಗಿರುವ ಕಾರಣವೇ ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಕೆಲವು ದಿನಗಳ ಹಿಂದೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಆ ರಾಜ್ಯಗಳ ಜನರೂ ಸಹ ಅಭಿವೃದ್ದಿ ಪರವಾದ ಬಿಜೆಪಿ ಸರ್ಕಾರವೇ ಬೇಕೆಂಬ ಕಾರಣದಿಂದ ವಿಪಕ್ಷಗಳನ್ನು ತಿರಸ್ಕರಿಸಿ ಬಿಜೆಪಿಗೆ ಮತ ನೀಡಿ ಆರ್ಶೀವದಿಸಿದ್ದಾರೆ. ಮುಂಬರುವ 2028 ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಬಹುಮತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಯುವ ಸಮೂಹ ದೇಶದ ಅಭಿವೃದ್ದಿಗಾಗಿ ಬಿಜೆಪಿ ಬೆಂಬಲಿಸಬೇಕಿದೆ ಎಂದ ಅವರು, ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ 2018-23 ರ ಅವಧಿಯಲ್ಲಿ ಮಸಾಲಾ ಜಯರಾಮ್ ಅವರು ನೂರಾರು ಕೋಟಿ ರೂಗಳ ಅನುದಾನ ತಂದು ಕ್ಷೇತ್ರದ ಅಭಿವೃದ್ದಿ ಮಾಡಿದ್ದರು. ಮುಂಬರುವ ಚುನಾವಣೆಯಲ್ಲಿಯೂ ಜನತೆ, ಯುವ ಸಮೂಹ ಮಸಾಲಾ ಜಯರಾಮ್ ಅವರನ್ನು ಬೆಂಬಲಿಸುವ ಮೂಲಕ ಕೇತ್ರದ ಅಭಿವೃದ್ದಿಗೆ ಸಹಕಾರ ನೀಡಬೇಕೆಂದರು.
ಭಾರತೀಯ ಜನತಾ ಪಕ್ಷ ಓರ್ವ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ನಗರ ಯುವ ಘಟಕದ ಅಧ್ಯಕ್ಷನನ್ನಾಗಿ ಮಾಡಿದೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಸೇರ್ಪಡೆಗೊಳಿಸಿ ಸಂಘಟನಾತ್ಮಕವಾಗಿ ಪಕ್ಷವನ್ನು ಬಲಪಡಿಸುತ್ತೇನೆ ಎಂದ ಅವರು, ನಿಕಟಪೂರ್ವ ಶಾಸಕ ಮಸಾಲಾ ಜಯರಾಮ್ ಅವರು ನನ್ನ ಮೇಲಿಟ್ಟಿರುವ ನಂಬಿಕೆ, ವಿಶ್ವಾಸವನ್ನು ನಗರದ 14 ವಾರ್ಡುಗಳಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ ಉಳಿಸಿಕೊಳ್ಳುತ್ತೇನೆ ಎಂದರು.
ವರದಿ: ಗಿರೀಶ್ ಕೆ ಭಟ್

