ಪಟ್ನಾ: ದೇಶದಾದ್ಯಂತ ಜಾತಿ ಗಣತಿ ನಡೆಯಬೇಕು ಎಂದು ವಿರೋಧ ಪಕ್ಷಗಳು ಅವಕಾಶ ವಂಚಿತ ಸಮುದಾಯಗಳ ಪರವಾಗಿ ಧ್ವನಿಯೆತ್ತಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಭಯದಿಂದಲೇ ಜನಗಣತಿಯೊಂದಿಗೆ ಜಾತಿಗಣತಿ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.
‘ನಿಮಗೆಲ್ಲರಿಗೂ ತಿಳಿದಿರುವಂತೆ ನನ್ನ ಕಾರನ್ನು ಮಿಥಿಲಾ ವಿಶ್ವವಿದ್ಯಾಲಯದ ಗೇಟ್‌ನಲ್ಲಿ ಪೊಲೀಸರು ತಡೆಯಲು ಪ್ರಯತ್ನಿಸಿದ್ದರು. ಆದರೆ, ನಾನು ಸುಮ್ಮನಾಗಲಿಲ್ಲ. ನಾನು ಕಾರಿನಿಂದ ಕೆಳಗಿಳಿದು ಕಾಲ್ನಡಿಗೆಯಲ್ಲಿ ತೆರಳಿ ‘ಶಿಕ್ಷಾ ನ್ಯಾಯ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ’ ಎಂದು ರಾಹುಲ್ ಹೇಳಿದ್ದಾರೆ.
ಬಿಹಾರ ಸರ್ಕಾರಕ್ಕೆ ನನ್ನನ್ನು ತಡೆಯಲು ಏಕೆ ಸಾಧ್ಯವಾಗಲಿಲ್ಲಎಂಬುದು ನಿಮಗೆ ಅರ್ಥವಾಗಿದೆಯೇ?, ಏಕೆಂದರೆ ನೀವು ಹೊಂದಿರುವ ಅಪಾರ ಶಕ್ತಿಯಿಂದಾಗಿ ನಾನು ಮುನ್ನಡೆಯುತ್ತಿದ್ದೇನೆ. ಅದೇ ರೀತಿ ಪ್ರಧಾನಿ ಮೋದಿ ಅವರು ತಲೆಬಾಗಬೇಕಾದ ಶಕ್ತಿಯು ನೀವೇ ಆಗಿದ್ದೀರಿಎಂದು ರಾಹುಲ್ ತಿಳಿಸಿದ್ದಾರೆ.