ಬೆಂಗಳೂರು : ಇನ್ವೆಸ್ಟ್ ಕರ್ನಾಟಕ 2025ರ ಸಮ್ಮಿಟ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೂರು ದಿನಗಳ ಕಾಲ ಸಮ್ಮಿಟ್ ನಡೆಯಲಿದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಬೃಹತ್ ಕೈಗಾರಿಕಾ ಇಲಾಖೆ ಭರ್ಜರಿ ಸಿದ್ಧತೆ ನಡೆಸಿದೆ.
ಇವತ್ತು ಸಂಜೆ 4 ಗಂಟೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಉಪಸ್ಥಿತಿ ಇರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಹ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ 19 ದೇಶಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಗೆ ನಿರ್ಣಾಯಕ ಕೊಡುಗೆ ನೀಡುತ್ತಿರುವ 14 ಉದ್ಯಮಗಳನ್ನು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಗುರುತಿಸಿ, ಪುರಸ್ಕರಿಸಲಾಗುತ್ತಿದೆ.
ಕರ್ನಾಟಕದಲ್ಲಿ 10 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ಹೂಡಿಕೆಯಾಗುವ ನಿರೀಕ್ಷೆಯಿದೆ.ಮಹತ್ವಾಕಾಂಕ್ಷಿ ‘ಕ್ವಿನ್ ಸಿಟಿ’ ಯೋಜನೆ ಸಂಬಂಧ ದೇಶ-ವಿದೇಶದ ಕೆಲವು ವಿಶ್ವವಿದ್ಯಾಲಯಗಳ ಜತೆ ಒಡಂಬಡಿಕೆ ನಡೆಯಲಿದೆ. ಹಿಂದಿನ ಸಲದ ಸಮಾವೇಶಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.
ಇವುಗಳಲ್ಲಿ ಗೂಗಲ್ ಎಕ್ಸ್ ಸಂಸ್ಥಾಪಕ ಸೆಬಾಸ್ಟಿಯನ್ ತ್ರನ್, ಲ್ಯಾಮ್ ರೀಸರ್ಚ್ ಮುಖ್ಯಸ್ಥ ಪ್ಯಾಟ್ರಿಕ್ ಲಾರ್ಡ್, ಜನರಲ್ ಅಟಾಮಿಕ್ಸ್ ಗ್ಲೋಬಲ್ ಕಾರ್ಪೊರೇಷನ್ ಸಿಇಒ ವಿವೇಕ್ ಲಾಲ್, ಟಿವಿಎಸ್ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ಸೇರಿದಂತೆ ಮುಂತಾದವರು ಮಾತನಾಡಲಿದ್ದಾರೆ.