ಬೆಂಗಳೂರು : ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗಾಗಿ ಪಡೆದಿರುವ ಸಾಲ & ಬಡ್ಡಿಯ ಹಣ ಸೇರಿ ಭರ್ತಿ ರೂ.439 ಕೋಟಿ ಪಾವತಿಸದೇ ವಂಚಿಸಿರುವ ಆರೋಪದ ಮೇಲೆ ತಮ್ಮ ವಿರುದ್ದದ ದೂರು & FIR ರದ್ದುಪಡಿಸುವಂತೆ ಕೋರಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇಂದು ನಡೆಸಿರುವ ಕರ್ನಾಟಕ ಹೈಕೋರ್ಟ್, ರಮೇಶ್ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವಂತೆ CID ಸಿಐಡಿಗೆ ಸೂಚಿಸಿದೆ.
ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಸಕ್ಷಮ ನ್ಯಾಯಾಲಯಕ್ಕೆ ಸಿಐಡಿಯು ಆರೋಪ ಪಟ್ಟಿ ಸಲ್ಲಿಸಬಹುದು. ಆದರೆ, ವಿಶೇಷ ನ್ಯಾಯಾಲಯವು ಈ ನ್ಯಾಯಾಲಯ ಆದೇಶಿಸುವವರೆಗೆ ಆರೋಪ ಪಟ್ಟಿಯ ಸಂಬಂಧ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದಿರುವ ಕೋರ್ಟ್, ವಿಚಾರಣೆಯನ್ನು ಜೂ.3ಕ್ಕೆ ಮುಂದೂಡಿ ಆದೇಶಿಸಿದೆ.
ಸರ್ಕಾರದ ಪರ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಜಗದೀಶ್ ಅವರು ವಾದಿಸಿ, 2,000 ಪುಟಗಳ ಆರೋಪ ಪಟ್ಟಿ ಸಿದ್ಧವಾಗಿದ್ದು, ವಾರಾಂತ್ಯದಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗುವುದು ಎಂದು ಪೀಠದ ಗಮನಕ್ಕೆ ತಂದರು.