ಹಾವೇರಿ : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಅಧಿಕಾರದ ಹಂಚಿಕೆ ಕುರಿತಾದ ಚರ್ಚೆಯು ಕಾವು ಪಡೆದುಕೊಂಡಿದೆ.
ಇದೀಗ ಪೂರ್ಣಾವಧಿಗೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಮುಂದುವರಿಯಲಿದೆ ಎಂದು ಸಿಎಂ ಪುತ್ರ ಹಾಗೂ ಎಂಎಲ್ಸಿ ಯತೀಂದ್ರ ಅವರು ಹೇಳುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅಧಿಕಾರ ಹಂಚಿಕೆ ವಿಚಾರವಾಗಿ ಸವಣೂರು ತಾಲೂಕಿನ ಹುಲುಗುರಿನಲ್ಲಿ ಮಾಧ್ಯಮಗಳಿಗೆ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, 50-50 ಅಧಿಕಾರ ಹಂಚಿಕೆಯೇ ಇಲ್ಲ. ಹೈಕಮಾಂಡ್ ಕೂಡ ಸಿಎಂಗೆ ಬೆಂಬಲ ಸೂಚಿಸಿದೆ. ಸಿದ್ದರಾಮಯ್ಯ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದರು.
ಯಾವುದೇ ರಾಜಕೀಯ ಪಕ್ಷಗಳ ಆಗಲಿ ಅಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಹಾಗೆಂದ ಮಾತ್ರಕ್ಕೆ ಸಿಎಂ ಬದಲಾಗುತ್ತಾರೆ ಎಂಬ ಅರ್ಥವಲ್ಲ. ಸಿಎಂ ಚೇಂಜ್ ಎಂಬ ಮಾತುಗಳು ಕೇಳಿ ಬಂದಾಕ್ಷಣ ಅದು ಹೈಕಮಾಂಡ್ ತೀರ್ಮಾನ ಮಾಡಿದೆ ಅಂತಲೂ ಅಲ್ಲ ಎಂದು ಸ್ಪಷ್ಟನೆ ನೀಡಿದರು.
ಸಿದ್ದರಾಮಯ್ಯ ನೇತೃತ್ವದಲ್ಲೇ ಐದು ವರ್ಷ ಕಾಂಗ್ರೆಸ್ ಸರ್ಕಾರ ಇರಬೇಕು ಎಂದು ಹೈಕಮಾಂಡ್ ನಾಯಕರು ಈಗಾಗಲೇ ಹೇಳಿದ್ದಾರೆ. ಹೈಕಮಾಂಡ್ ನಿಲುವು ಸ್ಪಷ್ಟವಾಗಿದ್ದು, ಸಿಎಂ ಬೆನ್ನಿಗೆ ಹೈಕಮಾಂಡ್ ನಿಂತಿದೆ ಎಂದು ಪುನರುಚ್ಚರಿಸಿದರು.