ಪವಿತ್ರ ಚಾರ್ ಧಾಮ್ ಯಾತ್ರೆ ಇಂದಿನಿಂದ ಅಧಿಕೃತವಾಗಿ ಪ್ರಾರಂಭವಾಗಿದೆ. ಭಕ್ತರ ದರ್ಶನಕ್ಕಾಗಿ ಕೇದಾರನಾಥ ದೇವಾಲಯದ ದ್ವಾರಗಳನ್ನು ಇಂದು ಬೆಳಗ್ಗೆ ತೆರೆಯಲಾಯಿತು.
ಆರು ತಿಂಗಳ ಸುದೀರ್ಘ ಕಾಯುವಿಕೆಯ ನಂತರ, ವೈದಿಕ ಮಂತ್ರಘೋಷಗಳೊಂದಿಗೆ ಬಾಬಾ ಕೇದಾರನಾಥನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉಪಸ್ಥಿತರಿದ್ದರು.ಭಾರತ ಮತ್ತು ವಿಶ್ವದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾದರು. ಇಡೀ ದೇವಾಲಯದ ಆವರಣ “ಜೈ ಶ್ರೀ ಕೇದಾರ್” ಮತ್ತು “ಹರ ಹರ ಮಹಾದೇವ” ಎಂಬ ನಾಮಸ್ಮರಣೆಯಿಂದ ಮಾರುಮೊಳಗಿತು.
ಗಣ್ಯರ ಶುಭಾಶಯ:ಸಿಎಂ ಧಾಮಿ: “ಪವಿತ್ರ ಚಾರ್ ಧಾಮ್ ಯಾತ್ರೆಗೆ ಆಗಮಿಸುವ ಎಲ್ಲಾ ಭಕ್ತರಿಗೆ ಆತ್ಮೀಯ ಸ್ವಾಗತ. ಬಾಬಾ ಕೇದಾರನಾಥ ಎಲ್ಲರಿಗೂ ಸುಖಕರ ಯಾತ್ರೆಯನ್ನು ಕರುಣಿಸಲಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಾರೈಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ: “ಚಾರ್ ಧಾಮ್ ಯಾತ್ರೆಯು ಭಾರತದ ಐಕ್ಯತೆ ಮತ್ತು ಶ್ರೀಮಂತ ಸಂಪ್ರದಾಯದ ಪ್ರತೀಕ. ಭಕ್ತರ ಯಾತ್ರೆ ಸುರಕ್ಷಿತವಾಗಿರಲಿ” ಎಂದು ಮೋದಿ ಶುಭ ಕೋರಿದ್ದಾರೆ.
2026ರ ಯಾತ್ರೆಯ ವಿಶೇಷತೆಗಳು:
ದಾಖಲೆ ಪ್ರಮಾಣದ ನೋಂದಣಿ: ಈ ವರ್ಷ ಕೇದಾರನಾಥ ದರ್ಶನಕ್ಕಾಗಿ ಈಗಾಗಲೇ 4.50 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. ಒಟ್ಟಾರೆ ಚಾರ್ ಧಾಮ್ ಯಾತ್ರೆಗೆ 14.50 ಲಕ್ಷಕ್ಕೂ ಅಧಿಕ ಮಂದಿ ಹೆಸರು ದಾಖಲಿಸಿದ್ದಾರೆ.
ಕಟ್ಟುನಿಟ್ಟಿನ ನಿಯಮ: ಆನ್ಲೈನ್ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಯಾತ್ರೆಗೆ ಅನುಮತಿ ನೀಡಲಾಗುತ್ತಿದೆ. ಹೆಲಿಕಾಪ್ಟರ್ ಬುಕಿಂಗ್ ಮತ್ತು ಟ್ರೆಕ್ಕಿಂಗ್ ನಿಯಮಗಳ ವಿವರಗಳು ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿದೆ.




