ಸೋನಿಪತ್: ಕಳೆದ ಕೆಲ ತಿಂಗಳಿನಿಂದ ಮಾಡೆಲ್‌ಗಳು (Model) ಹಾಗೂ ಇನ್ಫ್ಯೂಯನ್ಸೆರ್‌ಗಳ (Influencer) ಸಾವಿನ (Death) ಸುದ್ದಿ ಹೆಚ್ಚಾಗಿ ಕೇಳಿಬರುತ್ತಿದೆ. ಅದರಲ್ಲೂ ಈ ತಿಂಗಳಲ್ಲಿ ಒಂದರ ನಂತರ ಒಂದು ಸಾವಿನ ಸುದ್ದಿಗಳು ಬರಸಿಡಿಲಿನಂತೆ ಅಪ್ಪಳಿಸುತ್ತಿದೆ.
ಇದೀಗ ಮಾಡೆಲ್ ಒಬ್ಬರನ್ನ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಸೋನಿಪತ್‌ನ ಕಾಲುವೆಯೊಂದರೆ ಮಾಡೆಲ್ ಮೃತದೇಹ ಪತ್ತೆಯಾಗಿದೆ.
ಹರಿಯಾಣ (Haryana) ಮೂಲದ ಮಾಡೆಲ್ ಶೀತಲ್ ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕಿದೆ.
ನಾಪತ್ತೆಯಾಗಿದ್ದ ಶೀತಲ್
ಶೀತಲ್ ಕುಟುಂಬಸ್ಥರು ಹಾಗೂ ಪೊಲೀಸರ ಪ್ರಕಾರ ಶೀತಲ್ ಮೃತದೇಹ ಪತ್ತೆಯಾಗುವುದಕ್ಕೂ ಮೊದಲು ನಾಪತ್ತೆಯಾಗಿದ್ದರು, ಈ ಬಗ್ಗೆ ಶೀತಲ್ ಅವರು ಸಹೋದರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಶೀತಲ್ ಕೆಲಸಕ್ಕೆಂದು ಮನೆಯಿಂದ ಹೊರಹೋಗಿದ್ದು, ಮರಳಿ ಬಂದಿಲ್ಲವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಜೂನ್ 15ರಂದು ಶೀತಲ್ ದೇಹ ಪತ್ತೆಯಾಗಿದ್ದು, ಅದೇ ಕಾಲುವೆಯಲ್ಲಿ ಅವರ ಪ್ರಿಯಕರನ ಕಾರು ಸಿಕ್ಕಿದ್ದು, ಕಾರಿನಲ್ಲಿದ್ದ ಪ್ರಿಯಕರನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ತನಿಖೆ ನಡೆಸಲಿರುವ ಪೊಲೀಸರು
ಈ ಪ್ರಕರಣದ ಬಗ್ಗೆ ಮಾತನಾಡಿದ ಸೋನಿಪತ್ ಎಸಿಪಿ ಪ್ರಧಾನ ಕಚೇರಿಯ ಅಜಿತ್ ಸಿಂಗ್, ಕಾಲುವೆಯಲ್ಲಿ ಯುವತಿಯ ಶವ ಇರುವ ಬಗ್ಗೆ ಮಾಹಿತಿ ಸಿಕ್ಕ ನಂತರ ಸ್ಥಳಕ್ಕೆ ತೆರಳಿರುವ ಪೊಲೀಸರು ಮೃತದೇಹವನ್ನ ವಶಪಡಿಸಿಕೊಂಡಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ. ಶೀತಲ್ ಮಾಡೆಲ್ ಆಗಿರುವ ಕಾರಣದಿಂದ ಎಲ್ಲಾ ಆಯಾಮದಲ್ಲಿ ತನಿಖೆ ಮಾಡಲಿದ್ದು, ಮುಂದಿನ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.