ಲಂಚ ಪಡೆದರೆ ಸೂಕ್ತ ಕ್ರಮ ಶಾಸಕ: ಶಾಸಕ ಅಶೋಕ ಪಟ್ಟಣ
ರಾಮದುರ್ಗ: ಪಟ್ಟಣದ ಮಿನಿ ವಿಧಾನಸೌಧದ ತಹಶೀಲ್ದಾರ ಕಾರ್ಯಾಲಯದಲ್ಲಿ ಶನಿವಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಏರ್ಪಡಿಸಿದ ಲ್ಯಾಪಟಾಪ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಅಶೋಕ ಪಟ್ಟಣ ಮಾತನಾಡಿದರು.

ಕೈಬರಹದ ಮುಖಾಂತರ ಗ್ರಾಮ ಆಡಳಿತಾಧಿಕಾರಿಗಳು ಸರಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ವಿಳಂಬವಾಗುವುದನ್ನು ಅರಿತು, ತ್ವರಿತಗತಿಯಲ್ಲಿ ಜನತೆಗೆ ಸೇವೆ ಒದಗಿಸುವಂತಾಗಲು ಕಂದಾಯ ಇಲಾಖೆಯಿಂದ ಲ್ಯಾಪ್‌ಟಾಪ್ ವಿತರಣೆಗೆ ಮಾಡಲಾಗುತ್ತಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಾಸಕ ಅಶೋಕ ಪಟ್ಟಣ ಹೇಳಿದರು.
ಆಸ್ತಿಯ ಹಳೇ ದಾಖಲೆಗಳು ಆಸ್ತಿದಾರರ ಜೀವನ ಇದ್ದಂತೆ, ರೈತರ, ಜನತೆಯ ಹಳೇ ದಾಖಲೆಗಳನ್ನು ಗಣಕೀಕರಣ ಮಾಡುವ ಸಂದರ್ಭದಲ್ಲಿ ಜಾಗೃತೆ ವಹಿಸಿ, ಲೋಪಗಳು ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಕವಿಮಾತು ಹೇಳಿದ ಅವರು, ಕೆಲವು ಸಂದರ್ಭದಲ್ಲಿ ಜನತೆ ಅಷ್ಟೇ ಅಲ್ಲದೆ ಸರಕಾರದ ಉದ್ದೇಶಕ್ಕಾಗಿ ಜನಪ್ರತಿನಿಧಿಗಳು ಕೇಳಿದರೂ ದಾಖಲೆಗಳು ಲಭ್ಯವಿಲ್ಲ ಎಂಬ ಉತ್ತರ ಬರುತ್ತದೆ, ಇನ್ನು ಮುಂದಾದರೂ ಅಂತಹ ಪ್ರಸಂಗಗಳು ಎದುರಾಗದಂತೆ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಸರಕಾರದ ವಿವಿಧ ಸುಮಾರು 54 ಯೋಜನೆಗಳನ್ನು ಜನತೆಗೆ ತಲುಪಿಸಲು, ವಿವಿಧ ಪಿಂಚಣಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನತೆಗೆ ತಲುಪಿಸಲು ಗ್ರಾಮ ಆಡಳಿತಾಧಿಕಾರಿಗಳು ಹಾಗೂ ತಹಶೀಲ್ದಾರ ಕಾರ್ಯಾಲಯದ ಸಿಬ್ಬಂದಿ ಕೆಲಸ ಮಾಡಬೇಕು ಎಂದರು.
ಗ್ರಾಮೀಣ ಪ್ರದೇಶದ ಜನತೆಗೆ ವಿವಿಧ ಸೇವೆಗಳನ್ನು ಒದಗಿಸಲು ಗ್ರಾಮ ಆಡಳಿತಾಧಿಕಾರಿಗಳು ಹಾಗೂ ತಹಶೀಲ್ದಾರ ಕಾರ್ಯಾಲಯದ ಸಿಬ್ಬಂದಿ ಅಧಿಕ ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಜನತೆಯಿಂದ ಕೇಳಿ ಬರುತ್ತಿದೆ. ಸರಕಾರ ಕೊಡುವ ಸಂಬಳಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಒಂದು ವೇಳೆ ಲಂಚ ತೆಗೆದುಕೊಳ್ಳುವುದು ಸಾಬೀತಾದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಶಾಸಕ ಅಶೋಕ್ ಪಟ್ಟಣ ಹೇಳಿದರು.
ವರದಿ: ಮಂಜುನಾಥ ಕಲಾದಗಿ




