ಬೆಳಗಾವಿ : ಹಸಿ ಕಸ – ಒಣ ಕಸ ಬೇರ್ಪಡಿಸುವಿಕೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಲ್ಲಿ ಮಹಾನಗರ ಪಾಲಿಕೆ ಯಶಸ್ವಿಯಾಗಿದೆ. ಇದರಿಂದ ಪಾಲಿಕೆಗೆ ಪ್ರತಿ ತಿಂಗಳು 10 ಲಕ್ಷ ರೂ. ಹಣ ಉಳಿಕೆಯಾಗಿದೆ. ಕಸ ವಿಲೇವಾರಿ ಪ್ರಕ್ರಿಯೆ ಕುರಿತು ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.
ನಗರದಲ್ಲಿ ಕಸ ನಿರ್ವಹಣೆ ದೊಡ್ಡ ಸವಾಲಾಗಿತ್ತು. ಮನೆ ಮನೆಗಳಿಂದ ಕಸ ಸಂಗ್ರಹಿಸುವ ವೇಳೆ ಜನರು ಹಸಿ ಕಸ-ಒಣ ಕಸ ಬೇರ್ಪಡಿಸಿ ನೀಡದ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಹರಸಾಹಸ ಪಡುತ್ತಿದ್ದರು. ಆದರೆ, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿ ಶುಭ ಬಿ. ಅವರು ಬಂದ ಬಳಿಕ ನಗರದಲ್ಲಿ ಕಟ್ಟು ನಿಟ್ಟಾಗಿ ಹಸಿ ಮತ್ತು ಒಣ ಕಸ ಬೇರ್ಪಡಿಕೆ ಶುರುವಾಯಿತು. ಆರಂಭದಲ್ಲಿ ಸಾರ್ವಜನಿಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪೌರ ಕಾರ್ಮಿಕರ ಜೊತೆಗೆ ಕೆಲ ಜನರು ವಾಗ್ವಾದ ಕೂಡ ಮಾಡಿದ್ದರು. ನಂತರದ ದಿನಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿದ್ದು ಈಗ ಶೇ.80ರಷ್ಟು ಹಸಿ ಮತ್ತು ಒಣ ಕಸವನ್ನು ತಾವೇ ಬೇರ್ಪಡಿಸಿ ಪೌರ ಕಾರ್ಮಿಕರಿಗೆ ನೀಡುತ್ತಿದ್ದಾರೆ.
ನಗರದ ವಿವಿಧೆಡೆ ಮತ್ತು ಕೆಲವು ಗ್ರಾಮಗಳಿಂದ ಸಂಗ್ರಹಿಸುವ ಕಸವನ್ನು ಇಲ್ಲಿಯೇ ಸಂಸ್ಕರಿಸಲಾಗುತ್ತದೆ. ನಿತ್ಯ 120 ಟನ್ ಹಸಿ ಕಸ, 90 ಟನ್ ಒಣ ಕಸ ಶೇಖರಣೆಯಾಗುತ್ತಿದೆ. ಕಸ ಸಂಸ್ಕರಣೆ ಮಾಡಲು ತೆಲಂಗಾಣ ಮೂಲದ ರಾಮಕೀ ಕಂಪನಿಗೆ 2009 ರಿಂದ 2029ವರೆಗೆ ಟೆಂಡರ್ ನೀಡಲಾಗಿದೆ. ಟೆಂಡರ್ ಅವಧಿ ಪೂರ್ಣಗೊಂಡ ಬಳಿಕ ಎಲ್ಲ ಯಂತ್ರಗಳನ್ನು ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆಯೂ ಒಪ್ಪಂದವಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಕಸವನ್ನು ಸಂಸ್ಕರಣೆ ಮಾಡಿದ ಬಳಿಕ ಉಳಿಯುವ ನಿರುಪಯುಕ್ತ (ಇನ್ನರ್ಟ್) ತ್ಯಾಜ್ಯದ ಆಧಾರದ ಮೇಲೆ ರಾಮಕೀ ಅವರಿಗೆ ಹಣ ಪಾವತಿಸಲಾಗುತ್ತಿದೆ. ಪ್ರತಿ ಟನ್ಗೆ 1250 ರೂ. ನಿಗದಿ ಪಡಿಸಲಾಗಿದೆ. ಪ್ರತಿ ತಿಂಗಳು ಸುಮಾರು 38-40 ಲಕ್ಷ ರೂ. ಹಣ ಪಾವತಿಸಲಾಗುತ್ತಿತ್ತು. ಆದರೆ, ಈಗ ಶೇ.80ರಷ್ಟು ಹಸಿ ಮತ್ತು ಒಣ ಕಸ ಬೇರ್ಪಡಿಸುತ್ತಿರುವುದರಿಂದ ಇನ್ನರ್ಟ್ ಪ್ರಮಾಣ ಕಡಿಮೆಯಾಗಿ, ಅವರಿಗೆ ಪಾವತಿಸುವ ಮೊತ್ತವು 28-30 ಲಕ್ಷ ರೂಪಾಯಿಗೆ ಇಳಿಕೆಯಾಗಿದೆ. ಪ್ರತಿ ತಿಂಗಳು 8-10 ಲಕ್ಷ ರೂ. ಪಾಲಿಕೆಗೆ ಉಳಿತಾಯವಾಗಿದೆ.