ಬೆಳಗಾವಿ :- ಬೆಳೆಹಾನಿ ಸಮೀಕ್ಷೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕಟ್ಟುನಿಟ್ಟಿನ ಸೂಚನೆ.ಬೆಳಗಾವಿ ಯ ಆ.23(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ, ತಕ್ಷಣವೇ ಪರಿಹಾರ ವಿತರಿಸಬೇಕು. ಮನೆ ಹಾನಿಯಾಗಿರುವ ಮಾಹಿತಿಯನ್ನು ನಿಗಮದ ಪೋರ್ಟಲ್ ನಲ್ಲಿ ಅಳವಡಿಸಿ, ಪರಿಹಾರ ಬಿಡುಗಡೆಗೆ ಕ್ರಮ ವಹಿಸಬೇಕು. ಒಂದುವೇಳೆ ಸಮೀಕ್ಷೆಯಲ್ಲಿ ವ್ಯತ್ಯಾಸ, ಲೋಪದೋಷಗಳು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಆ.23) ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳೆ ಹಾನಿಯ ಕುರಿತು ಜಿಲ್ಲೆಯಲ್ಲಿ ಈಗಾಗಲೇ ಜಂಟಿ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿದೆ. ಬೆಳೆಹಾನಿ ಸಮೀಕ್ಷೆ ಪ್ರಕಾರ ರೈತರಿಗೆ ಪರಿಹಾರ ಹಣ ವರ್ಗಾವಣೆಯಾಗುತ್ತಿಲ್ಲ. ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದ ರೈತರಿಗೆ ಪರಿಹಾರ ಬಂದಿಲ್ಲ ಎಂದು ದೂರುಗಳು ಕೇಳಿ ಬರುತ್ತಿವೆ. ಅಧಿಕಾರಿಗಳು ಈ ರೀತಿಯ ವಿಳಂಬ ತೋರಬಾರದು ಎಂದು ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಸಮೀಕ್ಷೆ ಕೈಗೊಂಡ ಬಳಿಕ ಪರಿಹಾರ ಪೋರ್ಟಲ್ ನಲ್ಲಿ ನಮೂದಿಸಿ, ಅಪ್ರೂವಲ್ ನೀಡಿದ ಬೆಳೆಹಾನಿಗೊಳಗಾದ ರೈತರಿಗೆ ಈವರೆಗೂ ಪರಿಹಾರ ಹಣ ವರ್ಗಾವಣೆಯಾಗಿಲ್ಲ. ಕೂಡಲೇ ಅಂತಹ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಧಾರ್-ಆರ್.ಟಿ.ಸಿ ಜೋಡಣೆ ಪೂರ್ಣಗೊಳಿಸಿ:-ಆಧಾರ್- ಆರ್.ಟಿ.ಸಿ ಯಲ್ಲಿ ಹೆಸರುಗಳು ವ್ಯತ್ಯಾಸ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲದ ಕಾರಣ ಡಿಬಿಟಿ ಮೂಲಕ ಹಣ ವರ್ಗಾವಣೆಗೆ ತೊಂದರೆಯಾಗಿದೆ. ಕೂಡಲೇ ಅಂತಹ ರೈತರಿಗೆ ಆಧಾರ್ ಲಿಂಕ್ ಮಾಡಲು ಸೂಚನೆ ನೀಡಬೇಕು ಅಥವಾ ರೈತರಿಗೆ ಇಂಡಿಯನ್ ಪೋಸ್ಟ್ ಬ್ಯಾಂಕ್ ಖಾತೆ ತೆರೆಯಲು ಸೂಚನೆ ನೀಡಬೇಕು ಎಂದು ತಿಳಿಸಿದರು.
ಅಥಣಿ, ಗೋಕಾಕ್, ಚಿಕ್ಕೋಡಿ, ಕಾಗವಾಡ ನಿಪ್ಪಾಣಿ ತಾಲ್ಲೂಕಿನಲ್ಲಿ ಹೆಚ್ಚು ಆಧಾರ್-ಆರ್.ಟಿ.ಸಿ ಜೋಡಣೆಯಾಗಿಲ್ಲ. ಒಂದುವೇಳೆ ಎರಡರಲ್ಲಿಯೂ ಹೆಸರು ವ್ಯತ್ಯಾಸ ಕಂಡು ಬಂದಲ್ಲಿ ಅಂತಹ ಪ್ರಕರಣಗಳನ್ನು ಗುರುತಿಸಿ ಫ್ರೂಟ್ ತಂತ್ರಾಂಶದಲ್ಲಿ ಆಧಾರ್ ಪ್ರಕಾರ ನೋಂದಣಿ ಮಾಡಿ ಒಂದು ವಾರದೊಳಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕೆಲವು ತಾಲ್ಲೂಕುಗಳಲ್ಲಿ ಬಾಕಿ ಉಳಿದಿರುವ ಬೆಳೆಹಾನಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು. ಅದೇ ರೀತಿಯಲ್ಲಿ ಮನೆ ಹಾನಿಯಾಗಿರುವ ಸಮೀಕ್ಷೆ ಬಾಕಿಯಿದ್ದು, ಪರಿಹಾರ ಕೂಡ ವಿತರಣೆಯಾಗಿಲ್ಲ. ಕೂಡಲೇ ಸಮೀಕ್ಷೆ ಪೂರ್ಣಗೊಳಿಸಿ ಮನೆ ಹಾನಿಗಳಿಗೆ ವಾರ್ಗವಾರು ಪರಿಹಾರ ವಿತರಣೆ ಮಾಡಬೇಕು ಸೂಚಿಸಿದರು.
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ:-ಪರಿಹಾರ ವಿತರಣೆ ಸಂಬಂಧಿಸಿದ ತಾಲ್ಲೂಕಾ ತಹಶೀಲ್ದಾರ್ ಗಳ ಹಂತದಲ್ಲಿದೆ. ಇಂತಹ ಯಾವುದೇ ಪ್ರಕರಣಗಳು ಬಾಕಿ ಉಳಿಯಬಾರದು. ರೈತರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಆಧಾರ್-ಆರ್.ಟಿ.ಸಿ ಜೋಡಣೆ ಕೇವಲ 68% ಮಾತ್ರವಾಗಿದೆ. ಒಂದು ವಾರದೊಳಗೆ ಕನಿಷ್ಠ 85% ರಷ್ಟು ಆಧಾರ್ ಜೋಡಣೆಯಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಗ್ರಾಮಲೆಕ್ಕಾಧಿಕಾರಿಗಳಿಗೆ ಆಧಾರ್- ಆರ್.ಟಿ.ಸಿ ಜೋಡಣೆಗೆ ಸೂಚನೆ ನೀಡಬೇಕು.
ಎಲ್ಲ ತಹಶೀಲ್ದಾರ್ ಗಳು ಒಂದು ವಾರದೊಳಗೆ ರೈತರ ಆರ್.ಟಿ.ಸಿ ಗಳಿಗೆ ಆಧಾರ್ ಜೋಡಣೆ ಮಾಡುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಬೇಕು. ಆಯಾ ಗ್ರಾಮದ ಲೆಕ್ಕಾಧಿಕಾರಿಗಳು ಕಡ್ಡಾಯವಾಗಿ ಗ್ರಾಮದಲ್ಲೇ ವಾಸವಿದ್ದು ಆಧಾರ್ ಜೋಡಣೆ ಕಾರ್ಯ ಪೂರ್ಣಗೊಳಿಸಬೇಕು ,ಎಂದು ಜಿಲ್ಲಾಧಿಕಾರಿ ರೋಷನ್ ತಿಳಿಸಿದರು.
ಶುದ್ಧ ಕುಡಿಯುವ ನೀರು ಪೂರೈಕೆ ಕ್ರಮ:-ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪ್ರತಿ ಹದಿನೈದು ದಿನಕ್ಕೊಮ್ಮೆ ಕುಡಿಯುವ ನೀರು ಶುದ್ಧತೆ ಬಗ್ಗೆ ಪರೀಕ್ಷಿಸಬೇಕು. ಅದೇ ರೀತಿಯಲ್ಲಿ ಜಿಲ್ಲೆಯಲ್ಲಿರುವ ಇಂದಿರಾ ಕ್ಯಾಂಟಿನ್ ಗಳು ಸಮರ್ಪಕ ಕಾರ್ಯ ನಿರ್ವಹಿಸಬೇಕು.
ಹೊಸ ಇಂದಿರಾ ಕ್ಯಾಂಟಿನ್ ಗಳ ಪ್ರಾರಂಭಕ್ಕೆ ಈಗಾಗಲೇ ಗುರುತಿಸಿದ ಸ್ಥಳಗಳ ಬಗ್ಗೆ ಯಾವುದೇ ಸಮಸ್ಯೆಯಿದಲ್ಲಿ, ಕೂಡಲೇ ಸಂಭಂದಿಸಿದ ಶಾಸಕರ ಗಮನಕ್ಕೆ ತಂದು ಸ್ಥಳ ನಿಗದಿಪಡಿಸಬೇಕು. ಬಳಿಕ ಟೆಂಡರ್ ಕರೆದು ಕ್ಯಾಂಟಿನ್ ನಿರ್ಮಾಣಕ್ಕೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು.
ಜನತಾ ದರ್ಶನ ಅರ್ಜಿಗಳ ವಿಲೇವಾರಿ:-ಸಿ.ಎಂ ಜನತಾ ದರ್ಶನದಲ್ಲಿ ಸಲ್ಲಿಕೆಯಾಗಿರುವ ಗೋಕಾಕ್ ತಾಲ್ಲೂಕಿನ ಎರಡು ಅರ್ಜಿಗಳು ಬಾಕಿ ಉಳಿದಿವೆ. ಕೂಡಲೇ ಅರ್ಜಿ ವಿಲೇವಾರಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೋಕಾಕ್ ತಹಶೀಲ್ದಾರ್ ಮೋಹನ್ ಭಸ್ಮೆ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ರೈತರ ಜಮೀನುಗಳಿಗೆ ರಸ್ತೆಯಿಲ್ಲ ಎಂಬ ದೂರು ಬಂದಿದೆ. ರಸ್ತೆ ನಿರ್ಮಾಣಕ್ಕೆ ಕಂದಾಯ ಇಲಾಖೆಯ ಭೂ ನಕ್ಷೆಯಲ್ಲಿ ಯಾವುದೇ ಹಳೆ ನಕ್ಷೆ ಕೂಡ ಲಭ್ಯವಾಗಿಲ್ಲ ಹಾಗಾಗಿ ಅರ್ಜಿಗಳು ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ,
ಇಂತಹ ಪ್ರಕರಣಗಳಿಗೆ ನ್ಯಾಯಾಲಯದ ಹಂತದಲ್ಲಿ ಇತ್ಯರ್ಥಕ್ಕೆ ಅವಕಾಶವಿದೆ. ಕೂಡಲೇ ಪ್ರಕರಣ ಸರ್ಕಾರಿ ವಕೀಲರಿಗೆ ಹಸ್ತಾಂತರಿಸಬೇಕು ಒಂದುವೇಳೆ ರಸ್ತೆ ನಿರ್ಮಾಣಕ್ಕೆ ನ್ಯಾಲಯದಿಂದ ಆದೇಶ ಬಂದಲ್ಲಿ ಸಂಬಂಧಿಸಿದ ತಹಶೀಲ್ದಾರ್ ಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
15 ನೇ ಹಣಕಾಸು ಯೋಜನೆಯಡಿ ವಿವಿಧ ಕಾಮಗಾರಿಗ ಗಳು ಪ್ರಗತಿ ಹಂತದಲ್ಲಿವೆ. ಮುಂದಿನ ದಿನಗಳಲ್ಲಿ ಪ್ರಾರಂಭಿಸಬೇಕಾದ ಕಾಮಗಾರಿಗಳಿಗೆ ಕೂಡಲೇ ಟೆಂಡರ್ ಕರೆಯಲಾಗುವುದು ಎಂದು ಅಧಿಕಾರಿಗಳು ವಿವರಿಸಿದರು.
ಐಎಎಸ್ ಪ್ರೊಬೇಷನರಿ ಅಧಿಕಾರಿ ದಿನೇಶಕುಮಾರ ಮೀನಾ, ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಎಲ್ಲ ತಹಶೀಲ್ದಾರಗಳು, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.