ಬೆಂಗಳೂರು : ಮಂಜುನಾಥನಗರದಲ್ಲಿ ಭೀಕರ ಪ್ರೇಮ ತ್ರಿಕೋನ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನ ಲಿವ್-ಇನ್ ಸಂಗಾತಿಯನ್ನು ಬಿಟ್ಟು ಮತ್ತೊಬ್ಬನನ್ನು ಮದುವೆಯಾಗಲು ಸಂಚು ರೂಪಿಸಿ ಈ ಹತ್ಯೆ ಮಾಡಲಾಗಿದೆ.
ಈ ಸಂಬಂಧ ಪೊಲೀಸರು ಸ್ಯಾಂಡಲ್’ವುಡ್ ನಟಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಫೆಬ್ರವರಿ 18 ರಂದು ಕೊಲೆಯಾದ ವ್ಯಕ್ತಿಯನ್ನು ಮೋಹನ್ ರಾವ್ ಎಂದು ಗುರುತಿಸಲಾಗಿದೆ.
ಆರೋಪಿ ನಟಿ ಉರ್ಮಿಳಾ ಅಲಿಯಾಸ್ ಬಿಂದು, ಕನ್ನಡದ ‘ಭಜರಂಗಿ’, ‘ಪೊಲೀಸ್ ಕ್ವಾರ್ಟರ್ಸ್’ ಮತ್ತು ‘ಕಾಲಭೈರವ’ ಅಂತಹ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾಳೆ.
ಹತ್ಯೆಗೆ ಕಾರಣವಾದ ಮದುವೆ ಪ್ಲಾನ್
ಪೊಲೀಸರ ಪ್ರಕಾರ, ಬಿಂದು ಮತ್ತು ಆಕೆಯ ಪ್ರಿಯಕರ ವಿನಯ್ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಬಿಂದು ಜೊತೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಮೋಹನ್ ರಾವ್ ಇದಕ್ಕೆ ಅಡ್ಡಿಯಾಗಬಹುದು ಎಂದು ಭಾವಿಸಿ, ಆತನನ್ನು ಕೊಲ್ಲಲು ಇಬ್ಬರೂ ಸೇರಿ ಸಂಚು ರೂಪಿಸಿದ್ದರು. ಈ ಪ್ಲಾನ್‌ನಂತೆ ಬಿಂದು ಮತ್ತು ಮೋಹನ್ ವಾಸವಿದ್ದ ಮನೆಯಲ್ಲೇ ಪಾರ್ಟಿಯೊಂದನ್ನು ಆಯೋಜಿಸಲಾಗಿತ್ತು.
ಪಾರ್ಟಿ ಬಳಿಕ ನಡೆದ ದಾರುಣ ಕೊಲೆ
ಪಾರ್ಟಿಯಲ್ಲಿ ಮದ್ಯ ಸೇವಿಸಿದ ನಂತರ ಮನೆಯೊಳಗೆ ಮೋಹನ್ ಮೇಲೆ ದಾಳಿ ಮಾಡಲಾಗಿದೆ. ವಿನಯ್ ತನ್ನ ಸ್ನೇಹಿತ ಧನುಷ್ ಎಂಬಾತನ ಸಹಾಯದೊಂದಿಗೆ ಮೋಹನ್‌ಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಮೋಹನ್ ಕಿರುಚಾಡಲು ಶುರು ಮಾಡಿದಾಗ, ಬಿಂದು ಆತನ ಬಾಯಿ ಮತ್ತು ಮೂಗಿಗೆ ಪ್ಲ್ಯಾಸ್ಟರ್ (ಟೇಪ್) ಸುತ್ತಿ, ಕೈಕಾಲುಗಳನ್ನು ಕಟ್ಟಿದ್ದಾಳೆ ಎನ್ನಲಾಗಿದೆ. ಗಾಯಗಳ ಜೊತೆಗೆ ಉಸಿರುಗಟ್ಟಿದ ಪರಿಣಾಮ ಮೋಹನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೃತ್ಯದ ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.
12 ದಿನಗಳ ನಂತರ ಪತ್ತೆಯಾದ ಶವ
ಹತ್ಯೆ ನಡೆದು ಸುಮಾರು 12 ದಿನಗಳ ನಂತರ ಮನೆಯಿಂದ ದುರ್ನಾತ ಬರಲು ಶುರುವಾದಾಗ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ಪೊಲೀಸರು ಬಿಂದು, ವಿನಯ್ ಮತ್ತು ಧನುಷ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕ್ರೌರ್ಯದಲ್ಲಿ ಪ್ರತಿಯೊಬ್ಬರ ಪಾತ್ರವೇನು ಮತ್ತು ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.




