ಶಿಕ್ಷಕರ ಹಿತಾಶಕ್ತಿಗಾಗಿ ಕೆಲಸ ಮಾಡುವವರಿಗೆ ಗೆಲ್ಲಿಸುವ ಕಾರ್ಯವಾಗಲಿ – ಪಾತ್ರೆ
ಭಾಲ್ಕಿ : ಶಿಕ್ಷಕರ ಹಿತಾಶಕ್ತಿಗಾಗಿ ಕೆಲಸ ಮಾಡುವ ಸಂಘಟನೆಯ ಪದಾಧಿಕಾರಿಗಳಿಗೆ ಗೆಲ್ಲಿಸುವ ಕಾರ್ಯವಾಗಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ನಿರಂಜಪ್ಪ ಪಾತ್ರೆ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಸ್ವಾಭಿಮಾನಿ ಪೆನಾಲ್ ಶಿಕ್ಷಕರ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಶಿಕ್ಷಕರ ಕುಂದು ಕೊರತೆ ನೀಗಿಸುವ ನಿಟ್ಟಿನಲ್ಲಿ ಸಂಘಟನೆ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಮಾನ್ಯತೆ ನೀಡಿದೆ. ಇದೇ ಎ. 19 ರಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಚುನಾವಣೆ ನಡೆಯುತ್ತಲಿದೆ. ಈ ಚುನಾವಣೆಯಲ್ಲಿ ಶಿಕ್ಷಕರ ಹಿತಕ್ಕಾಗಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಗೆಲ್ಲಿಸುವ ಕಾರ್ಯವಾಗಬೇಕು. ಈ ಹಿಂದಿನ ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು ಮತ್ತು ಅಧ್ಯಕ್ಷರು ಶಿಕ್ಷಕರ ಯಾವುದೇ ಕಾರ್ಯ ಮಾಡಿಲ್ಲ. ಶಿಕ್ಷಕರಿಗೆ ಮಾನಸಿಕ ಕಿರುಕುಳ ನೀಡುವುದಲ್ಲದೆ, ಅವರಿಂದ ಪಡೆದ ಸದಸ್ಯತ್ವದ ಶುಲ್ಕದ ಲೆಕ್ಕ ಕೂಡ ಕೊಟ್ಟಿಲ್ಲ. ಹೀಗಾಗಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಶ್ರೇಯೋಭಿವೃದ್ಧಿಗಾಗಿ ಜಾತಿ ರಹಿತ ಸ್ವಾಭಿಮಾನಿ ಸಂಘ ಮುಂದೆ ಬಂದಿದೆ. ಬರುವ ಚುನಾವಣೆಯಲ್ಲಿ ಸ್ವಾಭಿಮಾನಿ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳಿ ಆಯ್ಕೆ ಮಾಡುವ ಮೂಲಕ ಶಿಕ್ಷಕರ ಹಿತ ಕಾಪಾಡುವ ಕೆಲಸವಾಗಬೇಕು ಎಂದು ಹೇಳಿದರು.

ನಿವೃತ್ತ ಶಿಕ್ಷಕ ಡಾ. ಕಾಶಿನಾಥ ಚಲವಾ ಮಾತನಾಡಿ, ಸುಮಾರು ವರ್ಷಗಳಿಂದ ಕೆಲವು ಪಟ್ಟಭದ್ರ ಹಿತಾಶಕ್ತಿಯ ಶಿಕ್ಷಕರು ಶಿಕ್ಷಕ ಸಂಘಟನೆಯನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಶಿಕ್ಷಕರ ಹಿತಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸ್ವಾಭಿಮಾನಿ ಶಿಕ್ಷಕರೆಲ್ಲರೂ ಸೇರಿ ಸಂಘಟನೆ ಮಾಡಿ, ಮುಂದಿನ ದಿನದಲ್ಲಿ ಶಿಕ್ಷಕರಿಗಾಗಿ ಉತ್ತಮ ಕೆಲಸ ಮಾಡುವ ನಿಟ್ಟಿನಲ್ಲಿ ಪಣ ತೊಟ್ಟಿದ್ದಾರೆ. ಹೀಗಾಗಿ ಬಸವರಾಜ ದಾನಾ ನೇತೃತ್ವದಲ್ಲಿನ ಸ್ವಾಭಿಮಾನಿ ಶಿಕ್ಷಕರ ಸಂಘಕ್ಕೆ ಚುನಾವಣೆಯಲ್ಲಿ ಗೆಲ್ಲಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಹಿತವನ್ನು ಕಾಪಾಡಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು. ನಿವೃತ್ತ ಮುಖ್ಯ ಶಿಕ್ಷಕ ಅಶೋಕ ಬಿರಾದಾರ ಮಾತನಾಡಿ, ಶಿಕ್ಷಕರಾದವರಿಗೆ ಯಾವುದೇ ಜಾತಿ ಭೇದ ವಿರಬಾರದು. ಆದರೆ ಕೆಲವರು ಜಾತಿ ಹೆಸರಿನಲ್ಲಿ ಮತ ಕೇಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಮುಖಂಡರಾದ ಬಾಲಾಜಿ ಬೈರಾಗಿ, ಗಣಪತಿ ಭಕ್ತಾ, ಸುಧಾಕರ ಗಾಯಕವಾಡ ಮಾತನಾಡಿ, ಸಂಘವು ಶಿಕ್ಷಕರ ಹಿತಕ್ಕಾಗಿ ದುಡಿಯುಂತಿರಬೇಕು. ಆದರೆ ಮೊದಲಿನ ಸಂಘಟನೆಯ ಪದಾಧಿಕಾರಿಗಳು ಶಾಲು, ಹಾರ, ತುರಾಯಿಗೆ ಸೀಮಿತರಾಗಿದ್ದುದು ದುರದೃಷ್ಟಕರ ಸಂಗತಿ ಎಂದು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕಲ್ಯಾಣರಾವ ಕುಂಬಾರಗೆರೆ, ಸಂದೀಪ ಉಮಾಜಿ, ಗೋವಿಂದರಾವ ಬಿರಾದಾರ, ಸಂಗೀತಾ ನಿಟ್ಟೂರೆ, ಸತ್ಯವಾನ ಕಾಂಬಳೆ, ದತ್ತಾತ್ರಿ ಕಾಟಕರ, ನಾಗನಾಥ ಭೊಸರೆ, ಅನಿತಾ ಮುಧೋಳೆ, ಬಸವರಾಜ ದಾನಾ, ದತ್ತು ಮುದಾಳೆ, ಗಣೇಶ ಸ್ವಾಮಿ, ರಾಮರಾವ ಬಾನಾ, ನರ‍್ಮಲಾ ಚಲವಾ, ವಿಜಯಲಕ್ಷಿö್ಮ ಪುಜಾರಿ, ರಾಜಕುಮಾರ ಬಿರಾದಾರ, ಮೊಹಮದ ಮುಜಾಮಲ್ಲಿ ಮತ್ತಿತರರು ಇದ್ದರು.
ಚುನಾವಣೆಯಲ್ಲಿ ಒಟ್ಟು ೧೩ ಜನ ನಿರ್ದೇಶಕರನ್ನು ಆಯ್ಕೆಮಾಡಬೇಕಾಗಿದೆ. ಸಾಮಾನ್ಯ ಕ್ಷೇತ್ರದಲ್ಲಿ ೯ ಅಭ್ಯರ್ಥಿಗಳು ಮತ್ತು ಮಹಿಳಾ ಕ್ಷೇತ್ರಕ್ಕೆ ೪ ಅಭ್ಯರ್ಥಿಗಳನ್ನು ಆಯ್ಕೆಮಾಡಬೇಕು. ಒಟ್ಟು ೬೪೦ ಮತದಾರರಿರುವ ಭಾಲ್ಕಿ ತಾಲೂಕು ಘಟಕಕ್ಕೆ ಎ.೧೯ ರಂದು ಚುನಾವಣೆ ನಿಗದಿಯಾಗಿದೆ. ಒಬ್ಬರು ಸಾಮಾನ್ಯ ಕ್ಷೇತ್ರದಲ್ಲಿ ಗರಿಷ್ಥ ೯ ಅಭ್ಯರ್ಥಿಗಳಿಗೆ ಮತ್ತು ಮಹಿಳಾ ಕ್ಷೇತ್ರಕ್ಕೆ ಗರಿಷ್ಠ ೪ ಅಭ್ಯರ್ಥಿಗಳಿಗೆ ಮತ ನೀಡಬೇಕು. – ನಿರಂಜಪ್ಪ ಪಾತ್ರೆ, ನಿರ್ದೇಶಕರು, ಕ.ರಾ.ಸ.ನೌ.ಸಂಘ ಭಾಲ್ಕಿ.
ಕೆಲವರು ಜಾತಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಶಿಕ್ಷಕರದ್ದು ಒಂದೇ ಜಾತಿ ಅದು ಶಿಕ್ಷಕ ಜಾತಿ, ಹೀಗಾಗಿ ಜಾತಿ ರಹಿತ, ಶಿಕ್ಷಕರ ಹಿತ ಕಾಪಾಡುವ ಸ್ವಾಭಿಮಾನಿ ಸಂಘದ ಸದಸ್ಯರಿಗೆ ಮತ ನೀಡುವ ಮೂಲಕ ಜಾತಿ ವ್ಯವಸ್ಥೆ ಕೊನೆಗೊಳಿಸುವ ಕಾರ್ಯವಾಗಬೇಕು. – ಡಾ| ಕಾಶಿನಾಥ ಚಲವಾ, ನಿವೃತ್ತ ಶಿಕ್ಷಕರು ಭಾಲ್ಕಿ.
ಶಿಕ್ಷಕರಲ್ಲಿ ವೈಮನಸ್ಸು ಬರಬಾರದು ಎಂದು ಅವಿರೋಧ ಆಯ್ಕೆಗೆ ಎಲ್ಲಾ ರೀತಿಯ ಪ್ರಯನ್ನ ಮಾಡಲಾಯಿತು. ಆದರೆ ಶಿಕ್ಷಕರ ಸಂಘದ ಕೆಲ ಪಟ್ಟಭದ್ರ ಹಿತಾಶಕ್ತಿಯ ಅಭ್ಯರ್ಥಿಗಳಿಂದ ಇದು ಸಾಧ್ಯವಾಗಿಲ್ಲ. ಹೀಗಾಗಿ ಎಲ್ಲರ ಮನಸ್ಸಿನ ಆಶೇಯ ಮೇರೆಗೆ ಸ್ವಾಭಿಮಾನ ಸಂಘಟನೆ ರಚಿಸಿ ನನ್ನ ನೇತೃತ್ವದಲ್ಲಿ ಚುನಾವಣೆ ಕಣದಲ್ಲಿ ಧುಮುಕಿದ್ದು ಎಲ್ಲರೂ ಆಶಿರ್ವದಿಸಬೇಕು. – ಬಸವರಾಜ ದಾನಾ, ಸ್ವಾಭಿಮಾನಿ ಶಿಕ್ಷಕರ ಸಂಘದ ಮುಖಂಡರು, ಭಾಲ್ಕಿ.
ವರದಿ: ಸಂತೋಷ್ ಬಿಜಿ ಪಾಟೀಲ




